Site icon Vistara News

National Savings Certificate : ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ನಲ್ಲಿ ಹೂಡಿಕೆಯಿಂದ ಲಾಭವೇನು?

Cash

ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್ ಅಥವಾ ರಾಷ್ಟ್ರೀಯ ಉಳಿತಾಯ ಪತ್ರ (NSE) ಅತ್ಯಂತ ಜನಪ್ರಿಯವಾದ ಹಾಗೂ ಅಷ್ಟೇ ಸುರಕ್ಷಿತವಾದ ಉಳಿತಾಯ ಯೋಜನೆ. 2024ರ ಜನವರಿ-ಮಾರ್ಚ್‌ ಅವಧಿಯಲ್ಲಿ ಸರ್ಕಾರ ಎನ್‌ಎಸ್‌ಇ ಮೇಲಿನ ಬಡ್ಡಿ ದರವನ್ನು 7.7%ರ ಯಥಾಸ್ಥಿತಿಯಲ್ಲಿಯೇ ಮುಂದುವರಿಸಿದೆ. ಬಡ್ಡಿಯನ್ನು ವಾರ್ಷಿಕವಾಗಿ ಒಟ್ಟಾಗಿ ಲೆಕ್ಕಾಚಾರ ಹಾಕಿದರೂ, ಮೆಚ್ಯೂರ್‌ ಆಗುವಾಗ ಅಸಲಿನ ಜತೆಗೆ ಸಿಗುತ್ತದೆ. ಇದರದಲ್ಲಿ ಹೂಡಿಕೆ ಮಾಡಬಹುದಾದ ಕನಿಷ್ಠ ಮೊತ್ತ 1000 ರೂ. ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ. ಠೇವಣಿ ಇಟ್ಟ ದಿನದಿಂದ 5 ವರ್ಷಗಳ ಬಳಿಕ ಎನ್‌ಎಸ್‌ಇ ಮೆಚ್ಯೂರ್‌ ಆಗುತ್ತದೆ.

ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ಗೆ ಸುದೀರ್ಘವಾದ ಇತಿಹಾಸವೇ ಇದೆ. 1950ರಲ್ಲಿ ಸರ್ಕಾರ ಸ್ವತಂತ್ರ ಭಾರತದ ಅಭಿವೃದ್ಧಿಯ ಸಲುವಾಗಿ ಹಣವನ್ನು ಸಂಗ್ರಹಿಸಲು ಉದ್ದೇಶಿಸಿದಾಗ ಈ ರಾಷ್ಟ್ರೀಯ ಉಳಿತಾಯ ಪತ್ರಗಳ ಪರಿಕಲ್ಪನೆ ಬಂತು. ದೇಶಾದ್ಯಂತ ಯಾವುದೇ ಅಂಚೆ ಕಚೇರಿಯಲ್ಲಿ ಇದನ್ನು ಖರೀದಿಸಬಹುದು. ಮಧ್ಯಮ ವರ್ಗದ ಜನರು ಸುರಕ್ಷಿತ ಹೂಡಿಕೆಯ ಸಲುವಾಗಿ ಎನ್‌ಎಸ್‌ಸಿಯನ್ನು ಬಳಸುವುದು ಸಾಮಾನ್ಯ.

ಎನ್‌ಎಸ್‌ಸಿನಲ್ಲಿ ಎರಡು ವಿಧಗಳಿವೆ. ಎನ್‌ಎಸ್‌ಸಿ VIII ಮತ್ತು IX ಎನ್‌ಎಸ್‌ಸಿ VIII ನಲ್ಲಿ ಸುರಕ್ಷಿತ ಹೂಡಿಕೆ ಮತ್ತು ತೆರಿಗೆ ಬೆನಿಫಿಟ್‌ ಪಡೆಯಬಹುದು. ಇದು 5 ವರ್ಷಗಳಲ್ಲಿ ಮೆಚ್ಯೂರಿಟಿ ಅವಧಿ ಪೂರೈಸುತ್ತವೆ. ಇದರಲ್ಲಿ 100 ರೂ.ಗಳಿಂದ 10,000 ರೂ. ಮುಖಬೆಲೆಯಲ್ಲಿ ಹೂಡಿಕೆ ಮಾಡಬಹುದು. IX ವಿಧಕ್ಕೆ ಹೋಲಿಸಿದರೆ ಇದರಲ್ಲಿ ಬಡ್ಡಿ ತುಸು ಕಡಿಮೆ.

ಎನ್‌ಎಸ್‌ಸಿ IX ಯಲ್ಲಿ ಕೂಡ ತೆರಿಗೆ ಬೆನಿಫಿಟ್‌ ಸಿಗುತ್ತದೆ. ಇಲ್ಲೂ 100 ರೂ.ಗಳಿಂದ 10,000 ರೂ. ಮುಖಬೆಲೆಯ ತನಕ ಸೌಲಭ್ಯವಿದೆ. ಆದರೆ ಇಲ್ಲಿ ಮೆಚ್ಯೂರಿಟಿಯ ಅವಧಿ 10 ವರ್ಷ. ಈಗ ಎನ್‌ಸಿಸಿಯ ಮತ್ತಷ್ಟು ವಿಶೇಷತೆಗಳನ್ನು ತಿಳಿಯೋಣ. ಈ ಎರಡೂ ಸರ್ಟಿಫಿಕೇಟ್‌ಗಳನ್ನು ಬ್ಯಾಂಕ್‌ ಗಳಲ್ಲಿ ಅಡಮಾನ ಇಟ್ಟು ಸಾಲ ಪಡೆಯಬಹುದು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ಕಡಿತದ ಅನುಕೂಲ ಗಳಿಸಬಹುದು. ಎನ್‌ಎಸ್‌ಸಿಯಲ್ಲಿ ಕೊನೆಯ ವರ್ಷದ ಬಡ್ಡಿಗೆ ಮಾತ್ರ ತೆರಿಗೆ ಅನ್ವಯಿಸುತ್ತದೆ.

ಎನ್‌ಎಸ್‌ಸಿಯನ್ನು ಒಬ್ಬ ವ್ಯಕ್ತಿ ಜಂಟಿ ಖಾತೆಯಲ್ಲೂ ಖರೀದಿಸಬಹುದು. ಆದರೆ ಕಂಪನಿಗಳು, ಟ್ರಸ್ಟ್‌ಗಳು ಖರೀದಿಸುವಂತಿಲ್ಲ. ಎನ್‌ಎಸ್‌ಸಿ ದಾಖಲೆ ಕಳೆದು ಹೋದರೆ ಅಥವಾ ಹಾನಿಯಾದರೆ ಡುಪ್ಲಿಕೇಟ್‌ ಸಿಗುತ್ತದೆ. ಪ್ರತಿ ವರ್ಷ ಸಿಗುವ ಬಡ್ಡಿಯನ್ನು ಬೇರೆ ಪತ್ರದ ಅಗತ್ಯ ಇಲ್ಲದೆ ಎನ್‌ಎಸ್‌ಸಿಗೇ ಮತ್ತೆ ಇನ್ವೆಸ್ಟ್‌ ಮಾಡಲಾಗುತ್ತದೆ. ಅಪ್ರಾಪ್ತರ ಹೆಸರಿನಲ್ಲಿಯೂ ಎನ್‌ಎಸ್‌ಸಿಯನ್ನು ಪಡೆಯಬಹುದು.

ಇದನ್ನೂ ಓದಿ: Money Guide: ಹೋಮ್‌ಲೋನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

ಎನ್‌ಎಸ್‌ಸಿನಲ್ಲಿ ಸಿಗುವ ಬಡ್ಡಿಗೆ ಟಿಡಿಎಸ್‌ ಅನ್ವಯವಾಗುವುದಿಲ್ಲ. ಆದರೆ ಬ್ಯಾಂಕಿನಲ್ಲಿ ಠೇವಣಿ ಇಡುವ ಫಿಕ್ಸೆಡ್‌ ಡಿಪಾಸಿಟ್‌ ಮೇಲೆ ಟಿಡಿಎಸ್‌ ಅನ್ವಯಿಸುತ್ತದೆ. ನೀವು ಬ್ಯಾಂಕಿನಲ್ಲಿ ಎಫ್‌ಡಿ ಮತ್ತು ಅಂಚೆ ಕಚೇರಿಯಲ್ಲಿ ಎನ್‌ಎಸ್‌ಸಿಯಲ್ಲಿ ಸಮಾನ ಮೊತ್ತವನ್ನು ಹೂಡಿಕೆ ಮಾಡಿ ನೋಡಿ. ಮೆಚ್ಯೂರಿಟಿ ಅವಧಿಯಲ್ಲಿ ಎನ್‌ಎಸ್‌ಸಿಯಲ್ಲಿ ಸಾಮಾನ್ಯವಾಗಿ ಹೆಚ್ಚು ಆದಾಯ ಸಿಗುತ್ತದೆ. ಜತೆಗೆ ಐದು ವರ್ಷ ಟಿಡಿಎಸ್‌ ಇರಲ್ಲ.

Exit mobile version