ಮುಂಬಯಿ: ಅದಾನಿ ಗ್ರೂಪ್ ಎನ್‌ಡಿಟಿವಿ ವಾಹಿನಿಯನ್ನು (NDTV) ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟ ಬೆನ್ನಲ್ಲೇ, ಎನ್‌ಡಿಟಿವಿಯ ಷೇರು ದರ ಬುಧವಾರ ೫% ಹೆಚ್ಚಳವಾಯಿತು.
ಎನ್‌ಡಿಟಿವಿ ಷೇರು ದರ ೩೮8 ರೂ.ಗೆ ಏರಿಕೆಯಾಗಿದ್ದು, ಕಳೆದ ೫೨ ವಾರಗಳಲ್ಲಿ ಗರಿಷ್ಠ ದರವಾಗಿದೆ. ಏಷ್ಯಾದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ಭಾರತದ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲಿ ಹೂಡಿಕೆ ಮತ್ತು ವಹಿವಾಟು ಹೆಚ್ಚಿಸಲು ಮುಂದಾಗಿದ್ದು, ಇದರ ಭಾಗವಾಗಿ ಎನ್‌ಡಿಟಿವಿಯ ೨೯% ಷೇರುಗಳನ್ನು ಖರೀದಿಸಿದ್ದಾರೆ. ಜತೆಗೆ ಷೇರುದಾರರಿಂದ ಇನ್ನೂ ೨೬% ಷೇರುಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇದರೊಂದಿಗೆ ಎನ್‌ಡಿಟಿವಿಯ ೫೫% ಷೇರುಗಳನ್ನು ಪಡೆದು ಆಡಳಿತಾತ್ಮಕ ನಿಯಂತ್ರಣವನ್ನು ವಹಿಸಿಕೊಳ್ಳಲು ಮುಂದಾಗಿದ್ದಾರೆ.
ಮಾರುಕಟ್ಟೆ ತಜ್ಞರ ಪ್ರಕಾರ, ಎನ್‌ಡಿಟಿವಿ ಷೇರುಗಳ ದರದ ಭವಿಷ್ಯದ ಸ್ಥಿತಿಗತಿ ಬಗ್ಗೆ ಗ್ರಹಿಸುವುದು ಕಷ್ಟ. ಅದಾನಿ ಗ್ರೂಪ್‌ಗಳ ಷೇರುಗಳ ಸ್ಥಿತಿಗತಿಯೂ ಅನಿಶ್ಚಿತ ಸ್ಥಿತಿಯಲ್ಲಿ ಇರುತ್ತವೆ. ಅಲ್ಪಾವಧಿಗೆ ಹೂಡಿಕೆ ಮಾಡುವ ಷೇರುದಾರರು ಈಗಿನ ಏರುಗತಿಯ ದರದ ಲಾಭ ಪಡೆಯಲು ಎನ್‌ಡಿಟಿವಿಯ ಷೇರುಗಳನ್ನು ಮಾರಾಟ ಮಾಡುವುದು ಸೂಕ್ತ ಎನ್ನುತ್ತಾರೆ ತಜ್ಞರು.
ದೀರ್ಘಕಾಲೀನ ಹೂಡಿಕೆದಾರರಿಗೆ ಲಾಭದಾಯಕವೇ? ಅಸಾನಿ ಗ್ರೂಪ್ ಮಾಧ್ಯಮ ಇಂಡಸ್ಟ್ರಿಯಲ್ಲಿ ಬಲವಾಗಿ ಹೆಜ್ಜೆ ಊರಿಕೊಳ್ಳಲು ಯತ್ನಿಸುತ್ತಿದೆ. ಎನ್‌ಡಿಟಿವಿ ಹೊರತುಪಡಿಸಿ ಅದಾನಿ ಗ್ರೂಪ್, ಬ್ಲೂಮ್‌ಬರ್ಗ್‌ಕ್ವಿಂಟ್ ಬಿಸಿನೆಸ್ ನ್ಯೂಸ್ ಸಂಸ್ಥೆಯ ಮಾತೃಸಂಸ್ಥೆ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾದ ೪೯% ಷೇರುಗಳನ್ನು ಖರೀದಿಸಿದೆ. ಹೀಗಾಗಿ ರಿಸ್ಕ್ ಎದುರಿಸಲು ಸಿದ್ಧರಿರುವ ಹೂಡಿಕೆದಾರರು ದೀರ್ಘಕಾಲಿಕ ಉದ್ದೇಶಕ್ಕಾಗಿ ಕೊಳ್ಳಬಹುದು ಎನ್ನುತ್ತಾರೆ ತಜ್ಞರು.
ಅದಾನಿ ಆಫರ್ ಸಫಲವಾಗಬಹುದೇ? ಅದಾನಿ ಗ್ರೂಪ್ ಪ್ರತಿ ಷೇರಿಗೆ ೨೯೪ ರೂ. ದರದಲ್ಲಿ ಷೇರುದಾರರಿಂದ ಎನ್‌ಡಿಟಿವಿ ಷೇರು ಖರೀದಿಗೆ ಮುಂದಾಗಿದೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ೩೭೦-೩೮೦ ರೂ. ಶ್ರೇಣಿಯಲ್ಲಿ ದರ ಇದೆ. ಹೀಗಾಗಿ ಅದಾನಿ ಗ್ರೂಪ್ ಆಫರ್ ರಿಟೇಲ್ ಹೂಡಿಕೆದಾರರನ್ನು ಆಕರ್ಷಿಸುವುದೇ ಎಂದು ಕಾದು ನೋಡಬೇಕಾಗಿದೆ. ಮತ್ತೊಂದು ಕಡೆ ಎನ್‌ಡಿಟಿ ಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಈ ಸ್ವಾಧೀನವನ್ನು ವಿರೋಧಿಸಿದ್ದಾರೆ.
ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಎನ್‌ಡಿಟಿವಿಯಲ್ಲಿ ೩೨.೨೬% ಷೇರುಗಳನ್ನು ಹೊಂದಿದ್ದಾರೆ. ಅದಾನಿ ಗ್ರೂಪ್ ಎನ್‌ಡಿಟಿವಿಯ ಮತ್ತೊಂದು ಪ್ರವರ್ತಕ ಕಂಪನಿ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಹೊಂದಿದ್ದ ೨೯.೧೮ ಪರ್ಸೆಂಟ್ ಷೇರುಗಳನ್ನು ಖರೀದಿಸಿದೆ. ಅಂದರೆ ಸಾರ್ವಜನಿಕ ಹೂಡಿಕೆದಾರರು ಹೊಂದಿರುವ ೩೮.೫೫ ಷೇರುಗಳಲ್ಲಿ ಹೆಚ್ಚುವರಿ ೨೬ ಪರ್ಸೆಂಟ್ ಷೇರುಗಳನ್ನು ಅದಾನಿ ಗ್ರೂಪ್ ಖರೀದಿಸಲು ಉದ್ದೇಶಿಸಿದೆ. ಅದಾನಿ ಗ್ರೂಪ್ ಸಾರ್ವಜನಿಕ ಹೂಡಿಕೆದಾರರಿಗೆ ಕಡಿಮೆ ದರದ ಆಫರ್ ಮುಂದಿಟ್ಟಿರುವುದನ್ನು ಗಮನಿಸಿದರೆ, ಇತರ ಹೂಡಿಕೆದಾರರ ಜತೆ ಈಗಾಗಲೇ ಡೀಲ್ ಮಾಡಿರುವಂತಿದೆ. ಅಂದರೆ ಮುಕ್ತ ಆಹ್ವಾನ ಯಶಸ್ವಿಯಾಗುವ ವಿಶ್ವಾಸವನ್ನು ಅದಾನಿ ಗ್ರೂಪ್ ಈಗಾಗಲೇ ಹೊಂದಿದೆ ಎನ್ನುತ್ತಾರೆ ವಿಶ್ಲೇಷಕರು.
ಇದನ್ನೂ ಓದಿ: Adani | ಎನ್‌ಡಿಟಿವಿ ಚಾನೆಲ್‌ನ 29.18% ಷೇರುಗಳನ್ನು ಖರೀದಿಸಿದ ಅದಾನಿ ಗ್ರೂಪ್