ನವ ದೆಹಲಿ: ಭಾರತದ ಬಾನಂಗಳದಲ್ಲಿ ಶೀಘ್ರದಲ್ಲಿಯೇ ಹೊಸ ಪ್ರಾದೇಶಿಕ ಏರ್‌ಲೈನ್ ಫ್ಲೈ91 ವಿಮಾನ ಹಾರಾಟ ( Fly 91) ಆರಂಭವಾಗಲಿದೆ.
ಮುಂದಿನ ಕೆಲವು ತಿಂಗಳುಗಳಲ್ಲಿಯೇ ದೇಶೀಯ ಮಾರ್ಗಗಳಲ್ಲಿ ಫ್ಲೈ 91 ಏರ್‌ಲೈನ್ ತನ್ನ ವಿಮಾನಗಳ ಹಾರಾಟವನ್ನು ಶುರು ಮಾಡಲಿದೆ. ಕಿಂಗ್‌ಫಿಶರ್ ಏರ್‌ಲೈನ್‌ನ ಮಾಜಿ ಉಪಾಧ್ಯಕ್ಷ ಮನೋಜ್ ಚಾಕೋ ಅವರು ಈ ಏರ್‌ಲೈನ್ ಅನ್ನು ಆರಂಭಿಸುತ್ತಿದ್ದಾರೆ. ಅವರ ಜತೆಗೆ ಫೈರ್‌ಫಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್‌ನ ಭಾರತೀಯ ಘಟಕದ ಮಾಜಿ ಮುಖ್ಯಸ್ಥ ಹರ್ಷ ರಾಘವನ್ ಕೈಜೋಡಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಏರ್‌ಲೈನ್ ಇತ್ತೀಚೆಗೆ ವಿಮಾನಯಾನ ಸಚಿವಾಲಯದಿಂದ ಎನ್‌ಒಸಿಗೆ ಅರ್ಜಿ ಸಲ್ಲಿಸಿದೆ. ಗೋವಾ ಮೂಲದ ಏರ್‌ಲೈನ್ ಆಗಿ ಸೇವೆ ಆರಂಭಿಸಲಿದೆ. ಮುಂಬರುವ ಸೆಪ್ಟೆಂಬರ್‌ನಲ್ಲಿ ಎರಡು ವಿಮಾನಗಳೊಂದಿಗೆ ಹಾರಾಟ ಶುರು ಮಾಡುವ ನಿರೀಕ್ಷೆ ಇದೆ. ಮೊದಲ ವರ್ಷ ವಿಮಾನಗಳ ಸಂಖ್ಯೆ 6ಕ್ಕೆ ಏರಿಕೆಯಾಗಲಿದೆ. 5 ವರ್ಷಗಳಲ್ಲಿ 32ಕ್ಕೆ ಏರಿಕೆಯಾಗಲಿದೆ ಎಂದು ವರದಿಯಾಗಿದೆ.