ನವ ದೆಹಲಿ: ಭಾರತದ ಹೊಸ ಏರ್‌ಲೈನ್ ಫ್ಲೈ91 (Fly91) ತನ್ನ ಬ್ರಾಂಡ್ ಲೋಗೊವನ್ನು ಬಿಡುಗಡೆಗೊಳಿಸಿದೆ. ಬ್ರಾಂಡ್ ಲೋಗೊ ಜತೆಗೆ ಭಾರತ್ ಅನ್‌ಬೌಂಡ್ (Bharat Unbound) ಎಂಬ ಟ್ಯಾಗ್‌ಲೈನ್ ಅನ್ನು ಸಂಸ್ಥೆ ಹೊಂದಿದೆ. ಈ ವರ್ಷ ಚಳಿಗಾಲದಲ್ಲಿ ಬಾನಂಗಳದಲ್ಲಿ ಹೊಸ ಏರ್‌ಲೈನ್ ನ ವಿಮಾನ ಹಾರಾಟ ಶುರುವಾಗುವ ಸಾಧ್ಯತೆ ಇದೆ.
ಫ್ಲೈ91 ಏರ್‌ಲೈನ್ ವೆಬ್‌ಸೈಟ್‌ನಲ್ಲಿ ಸಂಸ್ಥೆಯ ವಿವರಗಳನ್ನು ನೀಡಲಾಗಿದೆ. ಇದು ಪ್ರಾದೇಶಿಕ ಏರ್‌ಲೈನ್ ಸಂಸ್ಥೆಯಾಗಿದೆ. ಇಂಡಸ್ಟ್ರಿಯ ಪ್ರಮುಖರು ಹೂಡಿದ್ದಾರೆ. ವೃತ್ತಿಪರ ಹೂಡಿಕೆದಾರರ ನೆರವೂ ಲಭಿಸಿದೆ. ಸಂಸ್ಥೆಯು ತನ್ನ ಹಾರಾಟಗಳಿಗೆ ಎಟಿಆರ್ 72-600 ವಿಮಾನವನ್ನು (ATR 72-600) ಆಯ್ಕೆ ಮಾಡಿಕೊಂಡಿದೆ. ಭಾರತದುದ್ದಕ್ಕೂ 2 ಮತ್ತು 3ನೇ ಸ್ತರದ ಪಟ್ಟಣಗಳಿಗೆ ವಿಮಾನಗಳ ಹಾರಾಟ ನಡೆಸುವುದಾಗಿ ಏರ್‌ಲೈನ್ ತಿಳಿಸಿದೆ.
ಹರ್ಷ ರಾಘವನ್ ಅವರು ಫ್ಲೈ91 ಏರ್‌ಲೈನ್‌ನ ಅಧ್ಯಕ್ಷರಾಗಿದ್ದಾರೆ. ಮನೋಜ್ ಚಾಕೊ ಸಿಇಒ ಆಗಿದ್ದಾರೆ. ಏರ್‌ಲೈನ್‌ನ ನೋಂದಾಯಿತ ಕಚೇರಿ ಮುಂಬಯಿನಲ್ಲಿದೆ. ಕಾರ್ಪೊರೇಟ್ ಕಚೇರಿ ಪಣಜಿಯಲ್ಲಿ ಬರಲಿದೆ.
Introducing FLY91 – the airline that connects every Indian to their dreams.
— fly91.in (@fly91_IN) June 2, 2023
🦋 A symbol of India's mesmerising beauty and vibrant diversity. Our wings embody the promise of opportunity, guiding you through ethereal landscapes, and soaring ever closer to your dreams.#newairline pic.twitter.com/8CWzKLFn8z
ಇದನ್ನೂ ಓದಿ: IndiGo airline : ದೇಶದ ಅತಿ ದೊಡ್ಡ ಏರ್‌ಲೈನ್ ಇಂಡಿಗೊಗೆ 919 ಕೋಟಿ ರೂ. ಲಾಭ, ಕಾರಣವೇನು?
ಇದರೊಂದಿಗೆ ಭಾರತದ ಬಾನಂಗಳದಲ್ಲಿ ಶೀಘ್ರದಲ್ಲಿಯೇ ಮತ್ತೊಂದು ಹೊಸ ಪ್ರಾದೇಶಿಕ ಏರ್‌ಲೈನ್ ಹಾರಾಟ ಆರಂಭವಾಗಲಿದೆ. ಕಿಂಗ್‌ಫಿಶರ್ ಏರ್‌ಲೈನ್‌ನ ಮಾಜಿ ಉಪಾಧ್ಯಕ್ಷ ಮನೋಜ್ ಚಾಕೋ ಅವರು ಈ ಏರ್‌ಲೈನ್ ಅನ್ನು ಆರಂಭಿಸುತ್ತಿದ್ದಾರೆ. ಅವರ ಜತೆಗೆ ಫೈರ್‌ಫಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್‌ನ ಭಾರತೀಯ ಘಟಕದ ಮಾಜಿ ಮುಖ್ಯಸ್ಥ ಹರ್ಷ ರಾಘವನ್ ಕೈಜೋಡಿಸುತ್ತಿದ್ದಾರೆ ಎಂದು ಕೆಲ ತಿಂಗಳ ಹಿಂದೆಯೇ ವರದಿಯಾಗಿತ್ತು.
ಏರ್‌ಲೈನ್ ಇತ್ತೀಚೆಗೆ ವಿಮಾನಯಾನ ಸಚಿವಾಲಯದಿಂದ ಎನ್‌ಒಸಿಗೆ ಅರ್ಜಿ ಸಲ್ಲಿಸಿತ್ತು. ಗೋವಾ ಮೂಲದ ಏರ್‌ಲೈನ್ ಆಗಿ ಸೇವೆ ಆರಂಭಿಸಲಿದೆ. ಮುಂಬರುವ ಸೆಪ್ಟೆಂಬರ್‌ನಲ್ಲಿ ಎರಡು ವಿಮಾನಗಳೊಂದಿಗೆ ಹಾರಾಟ ಶುರು ಮಾಡುವ ನಿರೀಕ್ಷೆ ಇದೆ. ಮೊದಲ ವರ್ಷ ವಿಮಾನಗಳ ಸಂಖ್ಯೆ 6ಕ್ಕೆ ಏರಿಕೆಯಾಗಲಿದೆ. 5 ವರ್ಷಗಳಲ್ಲಿ 32ಕ್ಕೆ ಏರಿಕೆಯಾಗಲಿದೆ ಎಂದು ವರದಿಯಾಗಿತ್ತು.