ನವ ದೆಹಲಿ: ವಾಟ್ಸ್ ಆ್ಯಪ್‌ನಲ್ಲಿ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ಗ್ರೂಪ್ ವಿಡಿಯೊ ಕಾಲ್ ಏರ್ಪಡಿಸಲು ಕಾಲ್ ಲಿಂಕ್ಸ್ ( Call Links) ಎಂಬ ಹೊಸ ಫೀಚರ್ ಅನ್ನು ಕಲ್ಪಿಸಲಾಗುವುದು ಎಂದು ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ಮಂಗಳವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕಾಲ್ ಲಿಂಕ್ಸ್ ಫೀಚರ್‌ನಲ್ಲಿ ಬಳಕೆದಾರರು ಒಂದು ಲಿಂಕ್ ಅನ್ನು ಇತರರಿಗೆ ಕಳಿಸಿ ಆಡಿಯೊ ಅಥವಾ ವಿಡಿಯೊ ಕರೆಯಲ್ಲಿ ಭಾಗವಹಿಸಲು ತಿಳಿಸಬಹುದು. ಮುಂಬರುವ ದಿನಗಳಲ್ಲಿ ವಾಟ್ಸ್ ಆ್ಯಪ್‌ನಲ್ಲಿ 32 ಮಂದಿಯನ್ನು ಒಳಗೊಂಡ ಗ್ರೂಪ್ ವಿಡಿಯೊ ಕರೆಗಳನ್ನು ಇದರ ಮೂಲಕ ಸುಲಭವಾಗಿ ಮಾಡಬಹುದು. ಈ ಹಿಂದೆ ವಾಟ್ಸ್ ಆ್ಯಪ್‌ನಲ್ಲಿ ಗ್ರೂಪ್ ವಿಡಿಯೊ ಕರೆಗಳು 8 ಬಳಕೆದಾರರಿಗೆ ಸೀಮಿತವಾಗಿತ್ತು.
ಝೂಮ್, ಫೇಸ್ ಟೈಮ್, ಗೂಗಲ್ ಮೀಟ್‌ನಲ್ಲಿ ಕೆಲ ಕಾಲದಿಂದಲೇ ಕಾಲ್ ಲಿಂಕ್ಸ್ ಸೌಲಭ್ಯ ಇದೆ. ಭಾರತದಲ್ಲಿ ವಾಟ್ಸ್ ಆ್ಯಪ್ ಜನಪ್ರಿಯವಾಗಿರುವುದರಿಂದ ಕಾಲ್ ಲಿಂಕ್ಸ್ ಫೀಚರ್ ಅಳವಡಿಸುವುದರಿಂದ ಅನೇಕ ಮಂದಿ ಬಳಸುವ ಸಾಧ್ಯತೆ ಇದೆ.