ನವ ದೆಹಲಿ: ಜಿಎಸ್‌ಟಿ ಕುರಿತ ಹೊಸ ನಿಯಮಗಳು 2023ರ ಮೇ 1ರಿಂದ ಜಾರಿಯಾಗಲಿದೆ. ( New GST Rules) ನೂತನ ನಿಯಮಗಳ ಪ್ರಕಾರ 100 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ಇರುವ ಜಿಎಸ್‌ಟಿ ಪಾವತಿದಾರರು ತಮ್ಮ ಎಲೆಕ್ಟ್ರಾನಿಕ್ ಇನ್‌ವಾಯ್ಸ್ ಅನ್ನು ಇನ್‌ವಾಯ್ಸ್ ರಿಜಿಸ್ಟ್ರೇಶನ್ ಪೋರ್ಟಲ್‌ನಲ್ಲಿ (Invoice Registration Portal) 7 ದಿನಗಳೊಳಗೆ ಮಾಡಬಹುದು. ಸಕಾಲಕ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸವ ಸಲುವಾಗಿ 7 ದಿನಗಳಿಂತ ಹಳೆಯ ಇನ್ ವಾಯ್ಸ್‌ಗಳನ್ನು ರಿಪೋರ್ಟ್ ಮಾಡುವಂತಿಲ್ಲ ಎಂದು ಜಿಎಸ್‌ಟಿ ನೆಟ್ ವರ್ಕ್ (GSTN) ತಿಳಿಸಿದೆ.
ಹೊಸ ಜಿಎಸ್‌ಟಿ ನಿಯಮ ಏನೆನ್ನುತ್ತದೆ?
- ಜಿಎಸ್‌ಟಿ ನೆಟ್ ವರ್ಕ್ ತೆರಿಗೆದಾರರಿಗೆ ನೀಡಿರುವ ಸಲಹೆಯಲ್ಲಿ ಸರ್ಕಾರ ಹಳೆಯ ಇನ್ ವಾಯ್ಸ್‌ಗಳನ್ನು ಇ-ಇನ್ ವಾಯ್ಸ್ ಐಆರ್ಪಿ ಪೋರ್ಟಲ್‌ನಲ್ಲಿ ರಿಪೋರ್ಟ್ ಮಾಡಲು ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಿದೆ. ವಾರ್ಷಿಕ 100 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಇರುವವರಿಗೆ ಇದು ಅನ್ವಯವಾಗುತ್ತದೆ.
- ಈ ಮಿತಿಯು ಇನ್ ವಾಯ್ಸ್ಗೆ (Invoice) ಅನ್ವಯಿಸುತ್ತದೆ. ಉದಾಹರಣೆಗೆ ಒಂದು ಇನ್ ವಾಯ್ಸ್ ಏಪ್ರಿಲ್ 1, 2023ರ ದಿನಾಂಕ ಹೊಂದಿದ್ದರೆ ಏಪ್ರಿಲ್ 8, 2023ರ ಬಳಿಕ ರಿಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ.
- ಇ-ಇನ್ ವಾಯ್ಸ್ ವ್ಯವಸ್ಥೆಯಲ್ಲಿ 7 ದಿನಗಳಿಂತ ಹಳೆಯ ಇನ್ ವಾಯ್ಸ್ ಅನ್ನು ಕೈಬಿಡಲಾಗುವುದು.
- ಹೀಗಾಗಿ ತೆರಿಗೆದಾರರು 7 ದಿನಗಳ ಅವಧಿಯೊಳಗೆ ರಿಪೋರ್ಟ್ ಮಾಡುವುದು ನಿರ್ಣಾಯಕವಾಗಿರುತ್ತದೆ ಎಂದು ಜಿಎಸ್ಟಿಎನ್ ತಿಳಿಸಿದೆ.
- ಜಿಎಸ್‌ಟಿ ಕಾನೂನು ಪ್ರಕಾರ ಇನ್ ವಾಯ್ಸ್ ಐಆರ್ಪಿಯಲ್ಲಿ ಅಪ್ ಲೋಡ್ ಆಗದಿದ್ದರೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಸಿಗುವುದಿಲ್ಲ.
ಹೊಸ ನಿಯಮದ ಲಾಭವೇನು?
ದೊಡ್ಡ ಕಂಪನಿಗಳು ಹಳೆಯ ದಿನಾಂಕಗಳನ್ನು ನಮೂದಿಸಿ ಇ-ಇನ್ ವಾಯ್ಸ್‌ಗಳನ್ನು ಕಳಿಸುವ ಪರಿಪಾಠ ತಪ್ಪಲಿದೆ. ಆಯಾ ಕಾಲದ ಇ-ಇನ್‌ವಾಯ್ಸ್ ಸಕಾಲಕ್ಕೆ ಸಲ್ಲಿಕೆಯಾಗಲಿದೆ.
ಈಗ ವಾರ್ಷಿಕ 10 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಇರುವವರು ಎಲೆಕ್ಟ್ರಾನಿಕ್ ಇನ್ ವಾಯ್ಸ್ ಅನ್ನು ಎಲ್ಲ ಬಿ2ಬಿ ಟ್ರಾನ್ಸಕ್ಷನ್‌ಗಳಿಗೆ (B2B transactions) ಎಲೆಕ್ಟ್ರಾನಿಕ್ ಇನ್ ವಾಯ್ಸ್ ಸಲ್ಲಿಸಬೇಕಾಗುತ್ತದೆ. 2020ರ ಅಕ್ಟೋಬರ್ 1ರಿಂದ 500 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ಇರುವ ಕಂಪನಿಗಳಿಗೆ ಬಿ2ಬಿ ಟ್ರಾನ್ಸಕ್ಷನ್‌ಗಳಲ್ಲಿ ಇ-ಇನ್ ವಾಯ್ಸ್ ಕಡ್ಡಾಯವಾಗಿತ್ತು. ಬಳಿಕ ಈ ನಿಯಮವನ್ನು 100 ಕೋಟಿ ರೂ. ವಹಿವಾಟು ಹೊಂದಿದವರಿಗೂ 2021ರ ಜನವರಿ 1ರಿಂದ ವಿಸ್ತರಿಸಲಾಯಿತು. 2021ರ ಏಪ್ರಿಲ್‌ನಿಂದ 50 ಕೋಟಿ ರೂ. ವಹಿವಾಟಿಗೆ, 2022 ಏಪ್ರಿಲ್ 1ರಿಂದ 20 ಕೋಟಿ ರೂ. ವಹಿವಾಟಿಗೆ ಹಾಗೂ ಬಳಿಕ 10 ಕೋಟಿ ರೂ. ವಹಿವಾಟಿಗೆ ವಿಸ್ತರಿಸಲಾಯಿತು.
ಜಿಎಸ್‌ಟಿ ಸೋರಿಕೆಗೆ ತಡೆ ಸಂಭವ
ಕಳೆದ 2022-23ರಲ್ಲಿ ಒಟ್ಟು 1.01 ಲಕ್ಷ ಕೋಟಿ ರೂ. ಜಿಎಸ್‌ಟಿ ಸೋರಿಕೆಯನ್ನು ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. (GST evasion) ಈ ಹಿಂದಿನ ಸಾಲಿಗೆ ಹೋಲಿಸಿದರೆ ಸೋರಿಕೆಯ ಪ್ರಮಾಣ ಇಮ್ಮಡಿಯಾಗಿದೆ. ಜಿಎಸ್‌ಟಿ ಇಂಟಲಿಜೆನ್ಸ್ ನಿರ್ದೇಶನಾಲಯವು (DGGI) 21,000 ಕೋಟಿ ರೂ.ಗಳನ್ನು ರಿಕವರಿ ಮಾಡಿತ್ತು.
ಡಿಜಿಜಿಐ ಅಧಿಕಾರಿಗಳು 2022-23ರಲ್ಲಿ 1,01,300 ಕೋಟಿ ರೂ. ಮೊತ್ತದ ಜಿಎಸ್‌ಟಿ ಸೋರಿಕೆಯನ್ನು ಪತ್ತೆ ಹಚ್ಚಿದ್ದರು. ಇದರಲ್ಲಿ 21,000 ಕೋಟಿ ರೂ.ಗಳನ್ನು ರಿಕವರಿ ಮಾಡುವಲ್ಲಿ ಡಿಜಿಜಿಐ ಯಶಸ್ವಿಯಾಗಿತ್ತು. 2021-22ರಲ್ಲಿ ಡಿಜಿಜಿಐ 54,000 ಕೋಟಿ ರೂ. ಮೌಲ್ಯದ ಜಿಎಸ್‌ಟಿ ಸೋರಿಕೆಯನ್ನು ಪತ್ತೆ ಹಚ್ಚಿತ್ತು.
ಜಿಎಸ್‌ಟಿ ತೆರಿಗೆ ಸೋರಿಕೆಗೆ ಕಾರಣವೇನು?
ವಂಚಕರು ಸರಕು ಮತ್ತು ಸೇವೆಗಳ ನಿಜವಾದ ಮೌಲ್ಯವನ್ನು ಮರೆಮಾಚಿ, ಕಡಿಮೆ ಮೌಲ್ಯವನ್ನು ನಮೂದಿಸಿ ಕಡಿಮೆ ಜಿಎಸ್‌ಟಿ ಪಾವತಿಸುವುದು ವಂಚನೆಯ ಒಂದು ವಿಧ. ಜಿಎಸ್‌ಟಿ ತೆರಿಗೆ ವಿನಾಯಿತಿಯ ಅಧಿಸೂಚನೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಎರಡನೇ ವಿಧವಾದ ವಂಚನೆ. ಇನ್‌ಪುಟ್ ಕ್ರೆಡಿಟ್ ಟ್ಯಾಕ್ಸ್‌ನಲ್ಲಿ ವಂಚಿಸುವುದು ಮತ್ತೊಂದು ವಿಧ. ನಕಲಿ ಸಂಸ್ಥೆ ಮತ್ತು ನಕಲಿ ಇನ್ ವಾಯ್ಸ್‌ಗಳ ಮೂಲಕ ಜಿಎಸ್‌ಟಿ ಕೊಡದೆ ವಂಚಿಸುವುದು ಕೂಡ ತೆರಿಗೆ ಸೋರಿಕೆಗೆ ಮತ್ತೊಂದು ಕಾರಣವಾಗಿ ಪರಿಣಮಿಸಿದೆ.
ಕಳೆದ ಫೆಬ್ರವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹ 1,49,577 ಕೋಟಿ ರೂ.ಗೆ ಏರಿಕೆಯಾಗಿದೆ. ವಾರ್ಷಿಕ ಆಧಾರದಲ್ಲಿ 12% ಏರಿಕೆಯಾಗಿದೆ. ಇದರೊಂದಿಗೆ ಕಳೆದ 12 ತಿಂಗಳುಗಳಲ್ಲಿ ಸತತವಾಗಿ 1.4 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹ ಆದಂತಾಗಿದೆ (GST Collection) ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ಬುಧವಾರ ತಿಳಿಸಿದೆ. 2022ರ ಫೆಬ್ರವರಿಯಲ್ಲಿ ಜಿಎಸ್‌ಟಿ ಆದಾಯ 1,33,026 ಕೋಟಿ ರೂ.ಗಳಾಗಿತ್ತು.
ಜಿಎಸ್‌ಟಿ ಸಂಗ್ರಹದಲ್ಲಿ ಸಿಜಿಎಸ್‌ಟಿ 27,662 ಕೋಟಿ ರೂ, ಎಸ್‌ಜಿಎಸ್ ಟಿ 34,915 ಕೋಟಿ ರೂ, ಐಜಿಎಸ್‌ಟಿ 75,069 ಕೋಟಿ ರೂ. ಆಗಿದೆ. ಸೆಸ್ 11,931 ಕೋಟಿ ರೂ. ಸಂಗ್ರಹವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಪ್ರಕಾರ 2022-23ರಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ 12% ಏರಿಕೆ ನಿರೀಕ್ಷಿಸಲಾಗಿದೆ. ಕಳೆದ ಮಾರ್ಚ್‌ನಲ್ಲಿ 1.6 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಇ-ಇನ್‌ವಾಯ್ಸ್ ಪ್ರಕ್ರಿಯೆಯಲ್ಲಿ ಸುಧಾರಣೆಯಿಂದ ಜಿಎಸ್‌ಟಿ ಸೋರಿಕೆ ತಡೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ.