ನವದೆಹಲಿ: ವಾರದಲ್ಲಿ 4 ದಿನ ಕೆಲಸ, 3 ದಿನ ರಜೆಯ ವ್ಯವಸ್ಥೆಯನ್ನು ಬ್ರಿಟನ್ ಮತ್ತು ಕೆಲ ರಾಷ್ಟ್ರಗಳಲ್ಲಿ ಜಾರಿಗೆ ತರಲಾಗುತ್ತಿದೆ ಎಂಬ ಸುದ್ದಿಯನ್ನು ಇತ್ತೀಚೆಗೆ ನೀವು ಕೇಳಿರಬಹುದು. ಇದೀಗ ಭಾರತದಲ್ಲೂ ಅಂಥ ಪ್ರಯತ್ನ ಜುಲೈ 1ರಿಂದ ಜಾರಿಯಾಗುವ ನಿರೀಕ್ಷೆ ಇದೆ.
ಭಾರತದಲ್ಲಿ ಕೇವಲ ಕೆಲಸದ ವೇಳೆ ಮಾತ್ರವಲ್ಲದೆ, ನೂತನ ಕಾರ್ಮಿಕ ನೀತಿ ಸಂಹಿತೆಯೇ ಜುಲೈ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಆಗ ಉದ್ಯೋಗಿಗಳ ಭವಿಷ್ಯನಿಧಿಯ ಕಾಂಟ್ರಿಬ್ಯೂಷನ್‌ನಲ್ಲಿ ಭಾರಿ ಬದಲಾವಣೆಯಾಗಲಿದೆ. ಕೆಲಸದ ಸಮಯ, ಟೇಕ್ ಹೋಮ್ ಸ್ಯಾಲರಿಯಲ್ಲಿ ಬದಲಾವಣೆ ಆಗಲಿದೆ.
ಹೊಸ ಬದಲಾವಣೆ ಏನು?
ಉದ್ಯೋಗಿಗಳು ಮೂರು ದಿನ ವಾರದ ರಜೆ ಪಡೆಯಬಹುದು. ಆದರೆ ಉಳಿದ 4 ದಿನಗಳಲ್ಲಿ ದಿನಕ್ಕೆ 10-12 ಗಂಟೆ ಕೆಲಸ ಮಾಡಬೇಕಾಗುತ್ತದೆ. ಎಲ್ಲ ವಲಯಗಳಲ್ಲೂ ಪ್ರತಿ ತ್ರೈಮಾಸಿಕಕ್ಕೆ (ಮೂರು ತಿಂಗಳಿಗೆ) ಓವರ್ ಟೈಮ್ 50 ಗಂಟೆಯಿಂದ 125 ಗಂಟೆಗೆ ಏರಿಕೆಯಾಗಲಿದೆ.
ಪಿಎಫ್ ಹೆಚ್ಚಳ, ಟೇಕ್ ಹೋಮ್ ಸ್ಯಾಲರಿ ಕಡಿತ
ಹೊಸ ನೀತಿಯ ಪ್ರಕಾರ ಉದ್ಯೋಗಿಯ ಒಟ್ಟು ವೇತನದ ಅರ್ಧ ಭಾಗ ಮೂಲವೇತನ ಆಗಲಿದೆ. ಇದರ ಪರಿಣಾಮವಾಗಿ ಉದ್ಯೋಗಿಯ ಭವಿಷ್ಯನಿಧಿ ಖಾತೆಗೆ (ಪಿಎಫ್) ಉದ್ಯೋಗಿ ಮತ್ತು ಕಂಪನಿಯ ಕೊಡುಗೆ ಹೆಚ್ಚಲಿದೆ. ಏಕೆಂದರೆ ಪಿಎಪ್ ಕಾಂಟ್ರಿಬ್ಯೂಷನ್ ಮೂಲವೇತನವನ್ನು ಆಧರಿಸಿದೆ. ಪಿಎಫ್ ಕಾಂಟ್ರಿಬ್ಯೂಷನ್ ಏರಿಕೆಯಾದರೆ ಉದ್ಯೋಗಿಯ ಟೇಕ್ ಹೋಮ್ ಸ್ಯಾಲರಿ ಇಳಿಕೆಯಾಗಲಿದೆ. ಹೀಗಿದ್ದರೂ, ನಿವೃತ್ತಿಯ ಭವಿಷ್ಯನಿಧಿ ಮೊತ್ತ ಗಣನೀಯ ಹೆಚ್ಚಲಿದೆ.
ಹೊಸ ನಿಯಮದ ಪ್ರಕಾರ ಉದ್ಯೋಗಿಗೆ ದೊರೆಯುವ ಗ್ರಾಚ್ಯುಯಿಟಿ ಮೊತ್ತದಲ್ಲಿ ಏರಿಕೆಯಾಗಲಿದೆ. ಪಿಎಫ್ ಮತ್ತು ಗ್ರಾಚ್ಯುಯಿಟಿ ಮೊತ್ತದ ಏರಿಕೆ ಆಗುವುದರಿಂದ ನಿವೃತ್ತಿಯ ನಂತರದ ಬದುಕಿಗೆ ಆಸರೆಯಾಗಲಿದೆ.
ಕೇಂದ್ರ ಸರಕಾರ ಅಧಿಸೂಚನೆಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳು
ವೇತನ ಸಂಹಿತೆ 2019 | Code on wages,2019 |
ಉದ್ಯಮ ಸಂಬಂಧಗಳ ನೀತಿ-2020 | Industrial Relations Code, 2020 |
ಸಾಮಾಜಿಕ ಭದ್ರತಾ ನೀತಿ-2020 | Code on Social Security, 2020 |
ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿ ನೀತಿ-2020 | Occupational Safty, Health and Working Conditions Code, 2020 |