ನವದೆಹಲಿ: ನೂತನ ಕಾರ್ಮಿಕ ನೀತಿ ಸಂಹಿತೆ ಜುಲೈ ೧ರಿಂದ ಹಲವು ರಾಜ್ಯಗಳಲ್ಲಿ ಜಾರಿಯಾಗುತ್ತಿದೆ. ಇದರ ಪರಿಣಾಮ ಉದ್ಯೋಗಿಗಳ ವೇತನದ ಸ್ವರೂಪ, ಪಿಎಫ್ ಲೆಕ್ಕಾಚಾರ, ಸಮಯದ ಅವಧಿ, ರಜೆಯ ಲಭ್ಯತೆಯಲ್ಲಿ ಹೊಸ ಬದಲಾವಣೆಯಾಗಲಿದೆ. ಹಾಗಾದರೆ ಆ ಬದಲಾವಣೆಗಳೇನು? ಇಲ್ಲಿದೆ ವಿವರ.
ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧ, ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಕೆಲಸದ ನಿಯಮಾವಳಿಗಳಿಗೆ ಸಂಬಂಧಿಸಿ ನೂತನ ಕಾರ್ಮಿಕ ನೀತಿ ಸಂಹಿತೆ ಜಾರಿಯಾಗುತ್ತಿದೆ.
ಪಿಎಫ್ ಹೆಚ್ಚಳ: ಕಾರ್ಮಿನ ನೀತಿ ಸಂಹಿತೆ ಜಾರಿಯಿಂದ ಉದ್ಯೋಗಿಗಳ ನಿವೃತ್ತಿ ಭತ್ಯೆಗಳು ಹೆಚ್ಚುತ್ತವೆ. ಮುಖ್ಯವಾಗಿ ಭವಿಷ್ಯನಿಧಿ (ಪಿಎಫ್) ಮತ್ತು ಗ್ರಾಚ್ಯುಯಿಟಿ ವೃದ್ಧಿಸಲಿದೆ.
ಉದ್ಯೋಗಿ ಸೇವೆಯಿಂದ ವಜಾಗೊಂಡರೆ ಎರಡು ದಿನಗಳೊಳಗೆ ಕಂಪನಿ ಕೊಡಬೇಕಿರುವ ಹಣವನ್ನು ಪಾವತಿಸಬೇಕಾಗುತ್ತದೆ. ಈಗ ೩೦ರಿಂದ ೬೦ ದಿನಗಳ ಕಾಲಾವಧಿ ತೆಗೆದುಕೊಳ್ಳಬಹುದು. ಇದು ರಾಜೀನಾಮೆಗೆ ಅನ್ವಯವಾಗುವುದಿಲ್ಲ.
ನೂತನ ಕಾರ್ಮಿಕ ಸಂಹಿತೆಯ ಪ್ರಕಾರ ಉದ್ಯೋಗಿಯ ಭತ್ಯೆಗೆ ೫೦% ರ ಮಿತಿ ಇದೆ. ಹೀಗಾಗಿ ಒಟ್ಟಾರೆ ವೇತನದಲ್ಲಿ ೫೦% ಮೂಲ ವೇತನ ಎಂದು ಪರಿಗಣನೆಯಾಗಲಿದೆ. ಇದರಿಂದ ಪಿಎಫ್ ಖಾತೆಗೆ ಹೋಗುವ ಹಣದ ಮೊತ್ತ ಹೆಚ್ಚಲಿದೆ. ಅದೇ ಸಂದರ್ಭ ಟೇಕ್ ಹೋಮ್ ಸ್ಯಾಲರಿ (In-Hand Salary) ಕಡಿತವಾಗಲಿದೆ.
ಹೊಸ ನೀತಿಯ ಪ್ರಕಾರ ಕಂಪನಿಗಳು ವಾರದ ಕೆಲಸದ ದಿನಗಳನ್ನು ೫ ಅಥವಾ ೬ ದಿನಗಳ ಬದಲಿಗೆ ೪ಕ್ಕೆ ಕಡಿತಗೊಳಿಸಲೂ ಅವಕಾಶ ಇದೆ. ಆದರೆ ವಾರಕ್ಕೆ ೪೮ ಗಂಟೆಗಳ ಕೆಲಸ ಅಗತ್ಯ. ಅಂದರೆ ೪ ದಿನಗಳ ಕೆಲಸ ಎಂದರೆ ದಿನಕ್ಕೆ ೮ ಗಂಟೆಗಳ ಬದಲಿಗೆ ೧೨ ಗಂಟೆಗಳ ಕೆಲಸ ಮಾಡಬೇಕಾಗುತ್ತದೆ. ಪ್ರತಿಯಾಗಿ ೩ ದಿನಗಳ ವೇತನ ಸಹಿತ ರಜೆಯ ಸೌಲಭ್ಯ ಸಿಗುತ್ತದೆ.
ಇದನ್ನೂ ಓದಿ: ಭಾರತದಲ್ಲೂ ವಾರಕ್ಕೆ 4 ದಿನ ಕೆಲಸ, ಪಿಎಫ್ ಹೆಚ್ಚಳ ಮತ್ತಿತರ ಬದಲಾವಣೆ ಜುಲೈ 1ರಿಂದ ಜಾರಿ ನಿರೀಕ್ಷೆ