Site icon Vistara News

ವಿಸ್ತಾರ Money Guide | NSC | ರಾಷ್ಟ್ರೀಯ ಉಳಿತಾಯ ಪತ್ರಕ್ಕೆ ಹೊಸ ವರ್ಷ ಬಡ್ಡಿ ದರ ಏರಬಹುದೆ?

savings

ರಾಷ್ಟ್ರೀಯ ಉಳಿತಾಯ ಪತ್ರ (NSC) ಅತ್ಯಂತ ಜನಪ್ರಿಯವಾದ ಹಾಗೂ ನಿಶ್ಚಿತ ಆದಾಯ ನೀಡುವ ಹೂಡಿಕೆ ಯೋಜನೆ. ಯಾವುದೇ ಅಂಚೆ ಕಚೇರಿಗೆ ತೆರಳಿ ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ ಹೂಡಿಕೆ 1,000 ರೂ. ಲಾಕ್‌ ಇನ್‌ ಅವಧಿ 5 ವರ್ಷಗಳು. ಅತ್ಯಂತ ಸುರಕ್ಷಿತ ಯೋಜನೆಯಿದು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ 1.5 ಲಕ್ಷ ರೂ. ತನಕದ ಹೂಡಿಕೆಗೆ ತೆರಿಗೆ ವಿನಾಯಿತಿಯ ಅನುಕೂಲ ಪಡೆಯಬಹುದು. (ವಿಸ್ತಾರ Money Guide | NSC ) ಪ್ರಸ್ತುತ ವಾರ್ಷಿಕ 6.8% ಬಡ್ಡಿ ಆದಾಯವನ್ನು ಗಳಿಸಬಹುದು.

2022ರ ಡಿಸೆಂಬರ್‌ 31ರಂದು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ, 2023ರ ಮೊದಲ ತ್ರೈಮಾಸಿಕದಲ್ಲಿಯೂ, ಅಂದರೆ ಜನವರಿ-ಮಾರ್ಚ್‌ ಅವಧಿಯಲ್ಲಿಯೂ ಇದೇ ಬಡ್ಡಿ ದರ ಮುಂದುವರಿಯಲಿದೆ. ಎನ್‌ಎಸ್‌ಸಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಣೆಯಾಗುತ್ತದೆ.

2022ರಲ್ಲಿ ಆರ್‌ಬಿಐ ರೆಪೊ ದರ ಮತ್ತು ಹಣದುಬ್ಬರ ಎರಡೂ ಹೆಚ್ಚಳವಾಗಿತ್ತು. ಹೀಗಾಗಿ ಸಣ್ಣ ಉಳಿತಾಯಗಾರರು ಎನ್‌ಎಸ್‌ಸಿ ಬಡ್ಡಿ ದರದಲ್ಲೂ ಏರಿಕೆಯ ನಿರೀಕ್ಷೆಯಲ್ಲಿದ್ದಾರೆ. ಹಲವಾರು ಬ್ಯಾಂಕ್‌ಗಳು ಈಗ ಎನ್‌ಎಸ್‌ಸಿಗಿಂತ ಹೆಚ್ಚಿನ ಬಡ್ಡಿ ದರವನ್ನು ಎಫ್‌ಡಿಗೆ (ನಿಶ್ಚಿತ ಠೇವಣಿ) ನೀಡುತ್ತಿವೆ.

ಸಣ್ಣ ಉಳಿತಾಯಗಾರರಿಗೆ ಎನ್‌ಎಸ್‌ಸಿಯ ಲಾಭಗಳೇನು?

ರಾಷ್ಟ್ರೀಯ ಉಳಿತಾಯ ಪತ್ರ (National Savings Certificates) ಹೂಡಿಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಆದಾಯಕ್ಕೆ ಖಾತರಿ ಇರುತ್ತದೆ. ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾದ್ದರಿಂದ ಸುರಕ್ಷಿತ ಹೂಡಿಕೆಯಾಗುತ್ತದೆ. ಅಂಚೆ ಕಚೇರಿಗೆ ತೆರಳಿ ಹೂಡಿಕೆ ಮಾಡಬಹುದು. ಪಿಪಿಎಫ್‌ ಮಾದರಿಯಲ್ಲಿ ತೆರಿಗೆ ಅನುಕೂಲ ಲಭ್ಯ. ಕಂಪೌಂಡ್‌ ಇಂಟರೆಸ್ಟ್‌ನ ಪ್ರಯೋಜನ ಇಲ್ಲೂ ಲಭ್ಯವಿದೆ. ಅಂದರೆ ಬಡ್ಡಿಯ ಮೇಲೆ ಬಡ್ಡಿ ಸಿಗುತ್ತದೆ.

ಈಗ ನೀವು ಎನ್‌ಎಸ್‌ಸಿಯಲ್ಲಿ 1,000 ರೂ. ಹೂಡಿದರೆ ಐದು ವರ್ಷಗಳ ಬಳಿಕ 1,389 ರೂ. ಸಿಗಬಹುದು. 6.8% ಬಡ್ಡಿ ದರ ಸದ್ಯ ಲಭ್ಯವಿದೆ. ಕನಿಷ್ಠ ಹೂಡಿಕೆ 1,000 ರೂ. ಹಾಗೂ ಗರಿಷ್ಠ ಹೂಡಿಕೆಗೆ ಮಿತಿ ಇರುವುದಿಲ್ಲ. ಸ್ವಾರಸ್ಯವೆಂದರೆ 10 ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದು. ಎಷ್ಟೇ ಸಂಖ್ಯೆಯಲ್ಲಿ ಎನ್‌ಎಸ್‌ಸಿ ಪಡೆಯಬಹುದು.

ಹೀಗಿದ್ದರೂ, ಮೆಚ್ಯೂರಿಟಿ ಮೊತ್ತದ ಮೇಲೆ ಟಿಡಿಎಸ್‌ ಇರುವುದಿಲ್ಲವಾದ್ದರಿಂದ ಆದಾಯ ತೆರಿಗೆ ಅನ್ವಯವಾಗುತ್ತದೆ. ಎಲ್ಲ ಸಾರ್ವಜನಿಕ ಬ್ಯಾಂಕ್‌ಗಳು, ಖಾಸಗಿ ವಲಯದ ಐಸಿಐಸಿಐ, ಎಚ್‌ಡಿಎಫ್‌ಸಿ, ಎಕ್ಸಿಸ್‌ ಬ್ಯಾಂಕ್‌ಗಳಲ್ಲಿ ಎನ್‌ಎಸ್‌ಸಿಯನ್ನು ಪಡೆಯಬಹುದು.

Exit mobile version