Site icon Vistara News

ಬ್ಯಾಂಕ್‌ ಖಾತೆಗೆ ನಾಲ್ವರು ನಾಮಿನಿಗಳನ್ನು ಸೇರಿಸಲು ಅವಕಾಶ; ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆಯಲ್ಲಿ ಏನೇನು ಬದಲಾವಣೆ?

Nirmala Sitharaman

ನವದೆಹಲಿ: ಠೇವಣಿದಾರರು ಇನ್ನು ಮುಂದೆ ಬ್ಯಾಂಕ್ ಖಾತೆಗೆ ನಾಲ್ವರು ನಾಮಿನಿಯಾಗಿ ಸೇರ್ಪಡೆಗೊಳಿಸುವ ಅವಕಾಶ ಹೊಂದಲಿದ್ದಾರೆ. ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಲೋಕಸಭೆಯಲ್ಲಿ ಮಂಡಿಸಿದ ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ–2024 (Banking Laws Amendment Bill)ರಲ್ಲಿ ಈ ಬಗ್ಗೆ ತಿಳಿಸಿದ್ದಾರೆ.

ಪ್ರಸ್ತುತ ಬ್ಯಾಂಕ್ ಖಾತೆಗೆ ಒಬ್ಬರನ್ನು ನಾಮಿನಿ ಮಾಡಲು ಅವಕಾಶವಿದೆ. ಇದೀಗ ಮಸೂದೆ ಏಕಕಾಲದಲ್ಲಿ ನಾಲ್ವರನ್ನು ವಾರಸುದಾರರನ್ನಾಗಿ ಮಾಡಲು ಅವಕಾಶ ನೀಡಿದೆ. ಠೇವಣಿದಾರರು ಮತ್ತು ಹೂಡಿಕೆದಾರರ ಹಿತ ಕಾಪಾಡಲು ಸರ್ಕಾರವು ಈ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಬ್ಯಾಂಕ್‌ನಲ್ಲಿರುವ ಠೇವಣಿ, ಚಿನ್ನಾಭರಣ, ದಾಖಲೆ ಪತ್ರಗಳು ಹಾಗೂ ಲಾಕರ್‌ಗಳಿಗೂ ಈ ಕಾನೂನಿನಡಿ ಠೇವಣಿದಾರರು ತಮ್ಮ ಉತ್ತರಾಧಿಕಾರಿಗಳ ನೇಮಿಸುವ ಅಧಿಕಾರ ಹೊಂದಲಿದ್ದಾರೆ.

ಮಸೂದೆಯಲ್ಲಿ ಏನೇನಿದೆ?

ವಾರಸುದಾರರಿಲ್ಲದ ಲಾಭಾಂಶ, ಷೇರು, ಬಡ್ಡಿ ಅಥವಾ ಬಾಂಡ್‌ಗಳನ್ನು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ವರ್ಗಾಯಿಸಲು ಅನುವು ಮಾಡಿಕೊಡಲಿದೆ. ವಾರಸುದಾರರು ಇದ್ದರೆ ಆ ನಿಧಿಯ ಮೂಲಕ ಹಣ ವಾಪಸ್‌ ಪಡೆಯುವ ಅವಕಾಶವೂ ಇದೆ.

ಮಸೂದೆಯು ಸಬ್‌ಸ್ಟಾನ್ಶಿಯಲ್‌ ಇಂಟರೆಸ್ಟ್‌ (Substantial interest) ಅನ್ನು ಮರುವ್ಯಾಖ್ಯಾನಿಸುವುದನ್ನೂ ಪ್ರಸ್ತಾವಿಸುತ್ತದೆ. ಅಂದರೆ ಇಂದು ಕಂಪೆನಿಯಲ್ಲಿ ನಿರ್ದೇಶಕರು 5 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿದ್ದರೆ ಅದನ್ನು ಸಬ್‌ಸ್ಟಾನ್ಶಿಯಲ್‌ ಇಂಟರೆಸ್ಟ್‌ ಎಂದು ಪರಿಗಣಿಸಲಾಗುತ್ತದೆ. ಇಂತಹವರಿಗೆ ಸಾಲ ಕೊಡಲು ಮಂಡಳಿಯ ಅನುಮೋದನೆ ಅಗತ್ಯವಾಗಿರುತ್ತದೆ. ಇದೀಗ ಸಬ್‌ಸ್ಟಾನ್ಶಿಯಲ್‌ ಇಂಟರೆಸ್ಟ್‌ ಮೊತ್ತವನ್ನು 1968ರಲ್ಲಿ ನಿರ್ಧರಿಸಿದ 5 ಲಕ್ಷ ರೂ.ಗಳಿಂದ 2 ಕೋಟಿ ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಬ್ಯಾಂಕುಗಳು ಆರ್‌ಬಿಐಗೆ ಶಾಸನಬದ್ಧ ವರದಿಗಳನ್ನು ಸಲ್ಲಿಸುವ ದಿನಾಂಕಗಳನ್ನು ಪರಿಷ್ಕರಿಸುವ ಗುರಿಯನ್ನು ಮಸೂದೆ ಹೊಂದಿದೆ. ಪ್ರಸ್ತುತ ಬ್ಯಾಂಕುಗಳು ನಿಯಮಾವಳಿ ಅನುಸರಿಸಿರುವ ಬಗ್ಗೆ ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ಶುಕ್ರವಾರಗಳಂದು ವರದಿ ಸಲ್ಲಿಸಬೇಕು. ಆದರೆ ತಿದ್ದುಪಡಿ ಮಾಡಲಾದ ನಿಯಮದ ಪ್ರಕಾರ ತಿಂಗಳ 15ನೇ ತಾರೀಕು ಮತ್ತು ತಿಂಗಳಾಂತ್ಯಕ್ಕೆ ಈ ವರದಿ ಸಲ್ಲಿಸಿದರೆ ಸಾಕು.

ಪ್ರಸ್ತಾವಿತ ತಿದ್ದುಪಡಿಗಳು ಲೆಕ್ಕಪರಿಶೋಧಕರ (Auditors) ಸಂಭಾವನೆಯನ್ನು ನಿರ್ಧರಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸ್ವಾತಂತ್ರ್ಯವನ್ನು ನೀಡಲು ಮುಂದಾಗಿದೆ. ಇದು ಬ್ಯಾಂಕುಗಳಿಗೆ ಅತ್ಯುತ್ತಮ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುವ ಮೂಲಕ ಲೆಕ್ಕಪರಿಶೋಧನೆಯ ಗುಣಮಟ್ಟವನ್ನು ಸುಧಾರಿಸುವ ಸಾಧ್ಯತೆಯಿದೆ.

ಕಳೆದ ವಾರ ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದ ಈ ಮಸೂದೆಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ 1934, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ 1955, ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ 1970 ಮತ್ತು ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ 1980 ಅನ್ನು ತಿದ್ದುಪಡಿ ಮಾಡಿದೆ.

ಬಜೆಟ್‌ನಲ್ಲಿ ಪ್ರಸ್ತಾವ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024ರ ಬಜೆಟ್ ಭಾಷಣದಲ್ಲಿ, ಬ್ಯಾಂಕ್ ಆಡಳಿತವನ್ನು ಸುಧಾರಿಸಲು ಮತ್ತು ಹೂಡಿಕೆದಾರರ ರಕ್ಷಣೆಯನ್ನು ಹೆಚ್ಚಿಸಲು, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, ಬ್ಯಾಂಕಿಂಗ್ ಕಂಪನಿಗಳ ಕಾಯ್ದೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: Lending Rate: ಬ್ಯಾಂಕ್‌ ಆಫ್‌ ಬರೋಡಾ ಬಡ್ಡಿದರ ಹೆಚ್ಚಳ; ಸಾಲಗಾರರಿಗೆ ಇಎಂಐ ಇನ್ನಷ್ಟು ಭಾರ

Exit mobile version