Site icon Vistara News

ವಿಸ್ತಾರ Money Guide | ಆದಾಯ ತೆರಿಗೆದಾರರಿಗೆ ಅ.1 ರಿಂದ ಅಟಲ್ ಪಿಂಚಣಿ ಯೋಜನೆ ಇಲ್ಲ

cash

ಕೇಂದ್ರ ಸರ್ಕಾರ ತನ್ನ ಅಟಲ್‌ ಪಿಂಚಣಿ ಯೋಜನೆಯಲ್ಲಿ (Atal Pension Yojana scheme) ಮಹತ್ವದ ಬದಲಾವಣೆಯನ್ನು ಮಾಡಿದೆ. (ವಿಸ್ತಾರ Money Guide ) ಹಣಕಾಸು ಸಚಿವಾಲಯದ ನೂತನ ಆದೇಶದ ಪ್ರಕಾರ ೨೦೨೨ರ ಅಕ್ಟೋಬರ್‌ ೧ ರಿಂದ ಅಟಲ್‌ ಪಿಂಚಣಿ ಯೋಜನೆಯಲ್ಲಿ ಆದಾಯ ತೆರಿಗೆದಾರರು ಸೇರುವಂತಿಲ್ಲ. ಹೀಗಿದ್ದರೂ, ಅಕ್ಟೋಬರ್‌ ೧ಕ್ಕೆ ಮುನ್ನ ಸೇರಿದವರು ಮುಂದುವರಿಯಲಿದ್ದಾರೆ. ಅರ್ಹ ಜನತೆಗೆ ಪಿಂಚಣಿ ಯೋಜನೆಯನ್ನು ತಲುಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದಾಯ ತೆರಿಗೆ ಕಾಯಿದೆಯ ಪ್ರಕಾರ, ೨.೫ ಲಕ್ಷ ರೂ. ತನಕದ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.

ಸರ್ಕಾರ ಎಪಿವೈ ಅನ್ನು ೨೦೧೫ರ ಜೂನ್‌ ೧ರಂದು ಆರಂಭಿಸಿತ್ತು. ಮುಖ್ಯವಾಗಿ ಇದು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಒಳಗೊಂಡಿದೆ. ಈ ಪಿಂಚಣಿ ಯೋಜನೆಯಲ್ಲಿ ಚಂದಾದಾರರು ೬೦ ವರ್ಷ ಪೂರ್ಣಗೊಳಿಸಿದ ಬಳಿಕ, ಅವರ ಹೂಡಿಕೆಗೆ ಅನುಗುಣವಾಗಿ ತಿಂಗಳಿಗೆ ೧,೦೦೦ ರೂ.ಗಳಿಂದ ೫,೦೦೦ ರೂ. ತನಕ ಪಿಂಚಣಿ ಪಡೆಯುತ್ತಾರೆ.

ಹೊಸ ನಿಯಮವೇನು?

ಅಟಲ್‌ ಪಿಂಚಣಿಯನ್ನು ಯಾರು ಪಡೆಯಬಹುದು? ಪ್ರಸ್ತುತ ೧೮-೪೦ ವರ್ಷ ವಯಸ್ಸಿನ ನಾಗರಿಕರು ಅಟಲ್‌ ಪಿಂಚಣಿ ಯೋಜನೆಗೆ ಬ್ಯಾಂಕ್‌ ಅಥವಾ ಅಂಚೆ ಕಚೇರಿಯ ಶಾಖೆಯಲ್ಲಿ ಸೇರ್ಪಡೆಯಾಗಬಹುದು. ಆದರೆ ಈಗಾಗಲೇ ಬೇರೆ ಯಾವುದಾದರೂ ಸಾಮಾಜಿಕ ಭದ್ರತೆ ಸ್ಕೀಮ್‌ನಲ್ಲಿ ಸೇರಿದ್ದರೆ ಸಿಗುವುದಿಲ್ಲ. ಉದಾಹರಣೆಗೆ ಉದ್ಯೋಗಿಗಳ ಭವಿಷ್ಯನಿಧಿ (ಇಪಿಎಫ್)‌ ಯೋಜನೆಯಡಿ ಇದ್ದರೆ ಪಡೆಯುವಂತಿಲ್ಲ.

ಅಟಲ್‌ ಪಿಂಚಣಿಯಲ್ಲಿ ೨೦೨೨ರ ಮಾರ್ಚ್‌ ವೇಳೆಗೆ ೪.೦೧ ಕೋಟಿ ಖಾತೆಗಳು ಇವೆ. ಕಳೆದ ವರ್ಷ ೯೯ ಲಕ್ಷ ಖಾತೆಗಳನ್ನು ತೆರೆಯಲಾಗಿತ್ತು.

Exit mobile version