Site icon Vistara News

Adani stocks : ಅದಾನಿ ಎಫ್‌ಪಿಒ ವೇಳಾಪಟ್ಟಿಯಲ್ಲಿ ಬದಲಾವಣೆ ಇಲ್ಲ, ಹೆಚ್ಚುವರಿ ಷೇರು ಮಾರಾಟ ವಿಫಲ ಸಂಭವ

Adani stocks

ಮುಂಬಯಿ: ಹಿಂಡೆನ್‌ ಬರ್ಗ್‌ ಸಂಸ್ಥೆಯ ಸ್ಫೋಟಕ ವರದಿಯ ಬಳಿಕ (Adani stocks) ಷೇರು ದರದಲ್ಲಿ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ನ (Adani Group) ಮುಂದುವರಿದ ಷೇರು ಬಿಡುಗಡೆಯ ( FPO) ಬಗ್ಗೆ ಉಂಟಾಗಿರುವ ಊಹಾಪೋಹಗಳಿಗೆ ಕಂಪನಿ ತೆರೆ ಎಳೆದಿದೆ. ಎಫ್‌ಪಿಒ ವೇಳಾ ಪಟ್ಟಿ ಮತ್ತು ಷೇರುಗಳಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜನವರಿ 31ರಂದು ಎಪ್‌ಪಿಒ ಮುಕ್ತಾಯವಾಗಲಿದೆ. ಕಳೆದ ಶುಕ್ರವಾರ 20,000 ಕೋಟಿ ರೂ. ಎಫ್‌ಪಿಒದ ಮೊದಲ ದಿನ ಕೇವಲ 1 % ಷೇರುಗಳು ವಿಕ್ರಯವಾಗಿತ್ತು. ಹೂಡಿಕೆದಾರರಿಂದ ನೀರಸ ಪ್ರತಿಕ್ರಿಯೆ ಲಭಿಸಿತ್ತು.

20,000 ಕೋಟಿ ರೂ. ಎಫ್‌ಪಿಒ ವಿಫಲ ಸಂಭವ:

ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒದಲ್ಲಿ ಬಿಡುಗಡೆಯಾಗುವ ಪ್ರತಿ ಷೇರಿನ ದರ ಶ್ರೇಣಿಯನ್ನು 3,112 ರೂ.ಗಳಿಂದ 3,276 ರೂ.ಗೆನಿಗದಿಪಡಿಸಲಾಗಿತ್ತು. ಆದರೆ ಶುಕ್ರವಾರ ಬಿಎಸ್‌ಇನಲ್ಲಿ ಸೆಕೆಂಡರಿ ಮಾರುಕಟ್ಟೆಯಲ್ಲಿ ಷೇರಿನ ದರ 2,762 ರೂ.ಗಳ ಕೆಳಮಟ್ಟದಲ್ಲಿತ್ತು. ಹೀಗಾಗಿ ಷೇರುದಾರರಿಂದ ಎಫ್‌ಪಿಒಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಫ್‌ಪಿಒದಲ್ಲಿ ಹೆಚ್ಚಿನ ಬೆಲೆಗೆ ಷೇರುಗಳನ್ನು ಕೊಳ್ಳಲು ಅವರು ಮುಂದೆ ಬಂದಿರಲಿಲ್ಲ. ಹೀಗಾಗಿ ಷೇರಿನ ದರದಲ್ಲಿ ಮತ್ತಷ್ಟು ಡಿಸ್ಕೌಂಟ್‌ ಹಾಗೂ ವೇಳಾಪಟ್ಟಿಯಲ್ಲಿ ಬದಲಾವಣೆ ನಿರೀಕ್ಷಿಸಲಾಗಿತ್ತು.

ಕಳೆದ ಶುಕ್ರವಾರ ಅದಾನಿ ಎಂಟರ್‌ಪ್ರೈಸಸ್‌ ಷೇರು ದರದಲ್ಲಿ 18% ಇಳಿಕೆ ದಾಖಲಾಗಿತ್ತು. ಅಮೆರಿಕ ಮೂಲದ ಹಿಂಡೆನ್‌ ಬರ್ಗ್‌ ಎಂಬ ಮಾರುಕಟ್ಟೆ ಸಂಶೋಧನಾ ಸಂಸ್ಥೆ ತನ್ನ ಸ್ಫೋಟಕ ವರದಿಯಲ್ಲಿ ಅದಾನಿ ಗ್ರೂಪ್‌ ವಿರುದ್ಧ ಷೇರು ಅವ್ಯವಹಾರ, ನಕಲಿ ಕಂಪನಿಗಳ ಸ್ಥಾಪನೆ ಸೇರಿದಂತೆ ಗಂಭೀರ ಆರೋಪಗಳನ್ನು ಮಾಡಿತ್ತು. ಇದಾದ ಬಳಿಕ ಅದಾನಿ ಕಂಪನಿಗಳ ಷೇರು ದರ ಕುಸಿದಿತ್ತು.

Exit mobile version