ನವ ದೆಹಲಿ: ಅಕ್ಕಿ, ಗೋಧಿ, ಮೈದಾ ಇತ್ಯಾದಿ ಆಹಾರ ಧಾನ್ಯ ಅಥವಾ ಹಿಟ್ಟುಗಳನ್ನು ೨೫ ಕೆ.ಜಿ ಅಥವಾ ೨೫ ಲೀಟರ್‌ಗಿಂತ ಹೆಚ್ಚಿನ ತೂಕದ ಪ್ಯಾಕೇಟ್‌ನಲ್ಲಿ ಇಟ್ಟು ಮಾರಾಟ ಮಾಡುವುದಿದ್ದರೆ, ಅದಕ್ಕೆ ಜಿಎಸ್‌ಟಿ ಇರುವುದಿಲ್ಲ. ಏಕೆಂದರೆ ಅದು ಪ್ರಿ-ಪ್ಯಾಕೇಜ್ಡ್ ಮತ್ತು ಲೇಬಲ್ಡ್ ಸರಕಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಉದಾಹರಣೆಗೆ ಆಹಾರ ಧಾನ್ಯ ಅಥವಾ ಹಿಟ್ಟಿನ ೨೫ ಕೆಜಿ ಅಥವಾ ೨೫ ಲೀಟರ್ ಪ್ಯಾಕೇಟ್ ಮೇಲೆ ೫% ಜಿಎಸ್‌ಟಿ ಅನ್ವಯಿಸುತ್ತದೆ. ಆದರೆ ೩೦ ಕೆಜಿ ಪ್ಯಾಕೇಟ್ ಇದ್ದರೆ ೫% ಜಿಎಸ್‌ಟಿ ಅನ್ವಯವಾಗುದಿಲ್ಲ.
ಪ್ರಿ-ಪ್ಯಾಕೇಜ್ಡ್ ಆಹಾರ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದಕ್ಕೆ ಮುನ್ನ ಪ್ಯಾಕೇಟ್ ಅಥವಾ ಸೂಕ್ತ ಕಂಟೈನರ್‌ಗಳಲ್ಲಿ ಇಡಲಾಗುತ್ತದೆ.
ಚಂಡೀಗಢದಲ್ಲಿ ಜೂನ್ ೨೯ರಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ಮೊದಲೇ ಪ್ಯಾಕ್ ಮಾಡಿ ಮಾರಾಟ ಮಾಡುವ ಅಕ್ಕಿ, ಗೋಧಿ, ರಾಗಿ ಮೊದಲಾದ ಆಹಾರ ಧಾನ್ಯಗಳಿಗೆ ೫% ಜಿಎಸ್‌ಟಿ ವಿಧಿಸಲಾಗಿತ್ತು. ಇದಕ್ಕೂ ಮುನ್ನ ಟ್ರೇಡ್ ಮಾರ್ಕ್ ಇರುವ ನೋಂದಾಯಿತ ಬ್ರ್ಯಾಂಡ್‌ಗಳಿಗೆ ಮಾತ್ರ ಈ ತೆರಿಗೆ ಇತ್ತು.
ಆಹಾರ ಧಾನ್ಯಗಳು ಮಾತ್ರವಲ್ಲದೆ ಎಲ್‌ಇಡಿ ಬಲ್ಬ್, ಸೋಲಾರ್ ವಾಟರ್ ಹೀಟರ್ ಮೇಲೆಯೂ ೫% ಜಿಎಸ್‌ಟಿ ಅನ್ವಯಿಸಲಿದೆ. ದಿನಕ್ಕೆ ೧,೦೦೦ ರೂ.ಗಿಂತ ಕಡಿಮೆ ಬಾಡಿಗೆಯ ಹೋಟೆಲ್ ಕೊಠಡಿ ಬಾಡಿಗೆ, ಆಸ್ಪತ್ರೆ ರೂಮ್ ಬಾಡಿಗೆಯ ಮೇಲೆ ಕೂಡ ಜಿಎಸ್‌ಟಿ ಅನ್ವಯವಾಗಲಿದೆ.
ಎಲ್ಲ ವಿಧದ ಪ್ರಿ-ಪ್ಯಾಕೇಜ್ಡ್ ಆಹಾರ ಧಾನ್ಯಗಳ ಮೇಲೆ ೫% ಜಿಎಸ್‌ಟಿ ವಿಧಿಸುವುದರಿಂದ ದೇಶಾದ್ಯಂತ ಆಹಾರ ಧಾನ್ಯಗಳ ವರ್ತಕರಿಗೆ ಭಾರಿ ನಷ್ಟವಾಗಲಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (CAIT) ಆರೋಪಿಸಿದೆ.
ದೊಡ್ಡ ಬ್ರ್ಯಾಂಡ್‌ಗಳಿಗೆ ಅನುಕೂಲ ಆರೋಪ : ಜಿಎಸ್‌ಟಿ ಮಂಡಳಿಯ ಈ ನಿರ್ಧಾರದಿಂದ ಸಣ್ಣ ಉತ್ಪಾದಕರು ಮತ್ತು ವರ್ತಕರಿಗೆ, ಅಕ್ಕಿ ಗಿರಣಿಗಳ ಮಾಲೀಕರಿಗೆ ನಷ್ಟವಾಗಲಿದ್ದು, ದೊಡ್ಡ ಬ್ರ್ಯಾಂಡ್‌ಗಳಿಗೆ ಅನುಕೂಲವಾಗಲಿದೆ. ಕ್ರಮೇಣ ಸಣ್ಣ ವ್ಯಾಪಾರಿಗಳು ಮಾರುಕಟ್ಟೆಯಿಂದಲೇ ಕಣ್ಮರೆಯಾಗುವ ಆತಂಕ ಇದೆ. ದೊಡ್ಡ ಬ್ರ್ಯಾಂಡ್‌ಗಳು ಮಾತ್ರ ಉಳಿಯಲಿದೆ. ಬಳಿಕ ಅವುಗಳು ತಮಗೆ ಬೇಕಾದಂತೆ ದರಗಳನ್ನು ಹೆಚ್ಚಿಸುವ ಅಪಾಯ ಇದೆ ಎಂದು ಸಿಎಐಟಿ ತಿಳಿಸಿದೆ.
ದೇಶಾದ್ಯಂತ ೬,೫೦೦ ಆಹಾರ ಧಾನ್ಯಗಳ ಮಾರುಕಟ್ಟೆಗಳು ಇವೆ. ಈ ಮಾರುಕಟ್ಟೆಗಳಲ್ಲಿ ಸಣ್ಣ ಪುಟ್ಟ ರಿಟೇಲ್ ಮತ್ತು ಸಗಟು ಆಹಾರ ಧಾನ್ಯಗಳ ವರ್ತಕರು ವ್ಯಾಪಾರ ಮಾಡುತ್ತಿದ್ದಾರೆ.
ಇದನ್ನೂ ಓದಿ: GST rate hike| ಇಂದಿನಿಂದ ಬೆಲೆ ಏರಿಕೆಯ ಹೊಡೆತ, ಅಕ್ಕಿ, ಗೋಧಿ, ಹೋಟೆಲ್, ಆಸ್ಪತ್ರೆ ಖರ್ಚು ದುಬಾರಿ