ನವದೆಹಲಿ: ಸರ್ಕಾರ ಅಡುಗೆ ಅನಿಲ ಸಿಲಿಂಡರ್ ಮೇಲೆ ನೀಡುತ್ತಿದ್ದ ಸಬ್ಸಿಡಿ ನೆರವನ್ನು 9 ಕೋಟಿ ಬಡ ಉಜ್ವಲ ಫಲಾನುಭವಿಗಳಿಗೆ ಸೀಮಿತಗೊಳಿಸಿದೆ. ಇತರರು ಮಾರುಕಟ್ಟೆಯ ದರದಲ್ಲಿ ಪಡೆಯಬೇಕು ಎಂದು ತೈಲ ಕಾರ್ಯದರ್ಶಿ ಪಂಕಜ್ ಜೈನ್ ತಿಳಿಸಿದ್ದಾರೆ.
ಕಳೆದ 2020ರ ಜೂನ್‌ನಿಂದ ಅಡುಗೆ ಅನಿಲಕ್ಕೆ ಸಬ್ಸಿಡಿ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಉಜ್ವಲ ಫಲಾನುಭವಿಗಳಿಗೆ ಮಾತ್ರ ನೀಡಲಾಗುತ್ತಿದೆ ಎಂದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪೆಟ್ರೋಲ್ ಮೇಲೆ ಲೀಟರ್‌ಗೆ 8 ರೂ. ಹಾಗೂ ಡೀಸೆಲ್ ಮೇಲೆ 6 ರೂ. ಅಬಕಾರಿ ಸುಂಕ ಕಡಿತಗೊಳಿಸಿದ ಸಂದರ್ಭ, ಉಜ್ವಲ ಫಲಾನುಭವಿಗಳಿಗೆ ವರ್ಷಕ್ಕೆ 12 ಸಿಲಿಂಡರ್ ಪಡೆಯಲು ಪ್ರತಿ ಸಿಲಿಂಡರ್‌ಗೆ ತಲಾ 200 ರೂ. ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದ್ದರು. ಇತರರಿಗೆ 14.2 ಕೆ.ಜಿ ಎಲ್ಪಿಜಿ ಸಿಲಿಂಡರ್ ದರ 1,000 ರೂ.ಗಳ ಗಡಿ ದಾಟಿದೆ. 200 ರೂ. ಸಬ್ಸಿಡಿಯಿಂದ ಸರಕಾರಕ್ಕೆ 6,100 ಕೋಟಿ ರೂ. ವೆಚ್ಚವಾಗಲಿದೆ.
ಸರಕಾರ ಪೆಟ್ರೋಲ್ ಮೇಲಿನ ಸಬ್ಸಿಡಿಯನ್ನು 2010ರ ಜೂನ್‌ನಲ್ಲಿ ಅಂತ್ಯಗೊಳಿಸಿತ್ತು. ಡೀಸೆಲ್ ಮೇಲಿನ ಸಬ್ಸಿಡಿಯನ್ನು 2014ರಲ್ಲಿ ಸಮಾಪ್ತಿಗೊಳಿಸಿತ್ತು. ಸೀಮೆ ಎಣ್ಣೆ ಮೇಲಿನ ಸಬ್ಸಿಡಿಯೂ ಕೆಲ ವರ್ಷಗಳ ಹಿಂದೆ ಕೊನೆಯಾಗಿತ್ತು. ಇದೀಗ ಅಡುಗೆ ಅನಿಲದ ಸಬ್ಸಿಡಿ ಬಹುತೇಕ ಮುಗಿದ ಅಧ್ಯಾಯವಾಗಿದೆ.
ಭಾರತದಲ್ಲಿ 30.5 ಕೋಟಿ ಎಲ್ಪಿಜಿ ಸಂಪರ್ಕಗಳು ಇವೆ. ಇದರಲ್ಲಿ 9 ಕೋಟಿ ಉಜ್ವಲ ಯೋಜನೆಯ ಅಡಿಯಲ್ಲಿವೆ. ಉಜ್ವಲ ಯೋಜನೆಯಡಿಯಲ್ಲಿ ಎರಡನೇ ರಿಫಿಲ್ ಪ್ರಮಾಣ ಕುಸಿದಿದೆ ಎನ್ನುವುದು ನಿರಾಧಾರ ಎಂದು ಪಂಕಜ್ ಜೈನ್ ಹೇಳಿದರು.