ಮುಂಬಯಿ: ಷೇರು ಮಾರುಕಟ್ಟೆಯ ನಿಯಂತ್ರಕ ಸೆಬಿ, ಆರಂಭಿಕ ಷೇರು ಬಿಡುಗಡೆ ಅಥವಾ ಐಪಿಒಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದೆ. ಅರ್ಹ ಬಿಡ್ಡರ್ ಗಳು ಮಾತ್ರ ಐಪಿಒದಲ್ಲಿ ಬಿಡ್ ಸಲ್ಲಿಸಬೇಕು ಎಂಬ ಉದ್ದೇಶದಿಂದ ಈ ಸುಧಾರಣಾ ಕ್ರಮವನ್ನು ಸೆಬಿ ಜಾರಿಗೊಳಿಸಿದೆ.
ಕೆಲವು ಭಾರಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಪ್ರಭಾವಿ ಕುಳಗಳು ಷೇರು ಖರೀದಿದಾರರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಮಾತ್ರ ಐಪಿಒಗಳಲ್ಲಿ ಬಿಡ್ ಸಲ್ಲಿಸಿರುವುದನ್ನು ಸೆಬಿ ಗಮನಿಸಿದೆ. ಆದ್ದರಿಂದ ಅರ್ಹ ಬಿಡ್ ದಾರರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ನಿಯಮ ಬಿಗಿಗೊಳಿಸಲಾಗಿದೆ.
ಸೆಬಿ ಸೋಮವಾರ ಬಿಡುಗಡೆಗೊಳಿಸಿದ ಸುತ್ತೋಲೆ ಪ್ರಕಾರ, ಹೂಡಿಕೆದಾರರ ಬ್ಯಾಂಕ್ ಖಾತೆಯಲ್ಲಿ ಸೂಕ್ತ ಮೊತ್ತದ ದುಡ್ಡಿದ್ದರೆ ಮಾತ್ರ ಐಪಿಒದಲ್ಲಿ ಬಿಡ್ ಸಲ್ಲಿಸಬಹುದು. ಸೆಬಿಯ ಈ ಹೊಸ ನಿಯಮವು ಐಪಿಒದಲ್ಲಿ ಭಾಗವಹಿಸುವ ಎಲ್ಲ ಕೆಟಗರಿಯ ಹೂಡಿಕೆದಾರರಿಗೂ ಅನ್ವಯಿಸಲಿದೆ. ರಿಟೇಲ್, ಅರ್ಹ ಸಾಂಸ್ಥಿಕ ಹೂಡಿಕೆದಾರರು, ಇತರ ಮೀಸಲು ಕೆಟಗರಿಯ ಹೂಡಿಕೆದಾರರಿಗೂ ಅನ್ವಯವಾಗಲಿದೆ. ಸೆಪ್ಟೆಂಬರ್ 1ರ ಬಳಿಕ ಎಲ್ಲ ಐಪಿಒಗಳಲ್ಲಿ ಇದು ಕಡ್ಡಾಯವಾಗಲಿದೆ. ರಿಟೇಲ್ ಹೂಡಿಕೆದಾರರು ಮೊದಲು ಹಣ ಪಾವತಿಸಿಯೇ ಐಪಿಒದಲ್ಲಿ ಬಿಡ್ ಸಲ್ಲಿಸಬೇಕಾಗುತ್ತದೆ. ಆದರೆ ಸಾಂಸ್ಥಿಕ ಹೂಡಿಕೆದಾರರ ಬಿಡ್‌ಗೆ ಸಂಬಂಧಿಸಿದ ನಿಯಮಗಳು ಈಗ ಬಿಗಿಯಾದಂತಾಗಿದೆ.
ಇತ್ತೀಚಿನ ಕೆಲವು ಐಪಿಒಗಳಲ್ಲಿ, ಸಾಂಸ್ಥಿಕ ಹೂಡಿಕೆದಾರರ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ದುಡ್ಡಿಲ್ಲ ಎಂಬ ಕಾರಣಕ್ಕಾಗಿ ಬಿಡ್ ಅರ್ಜಿ ತಿರಸ್ಕೃತವಾಗಿತ್ತು. ಹೊಸ ನಿಯಮದ ಪರಿಣಾಮ ಬಿಡ್ ದಾರರ ನಿಖರ ಸಂಖ್ಯೆ ಗೊತ್ತಾಗಲಿದೆ.
ಇದನ್ನೂ ಓದಿ: MODI 8 Years: ಎಂಟು ವರ್ಷಗಳಲ್ಲಿ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ 3 ಪಟ್ಟು ಹೆಚ್ಚಳ, 1450 ಷೇರುಗಳ ಲಾಭ ಡಬಲ್!