ನವ ದೆಹಲಿ: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಗಡುವನ್ನು ಜುಲೈ ೩೧ರಿಂದಾಚೆಗೆ ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ತಿಳಿಸಿದ್ದಾರೆ. ಬಹುತೇಕ ಐಟಿ ರಿಟರ್ನ್ ನಿಗದಿತ ಗಡುವಿನ ಒಳಗೆ ಸಲ್ಲಿಕೆಯಾಗುವ ನಿರೀಕ್ಷೆ ಇರುವುದರಿಂದ ವಿಸ್ತರಣೆ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.
೨೦೨೧-೨೨ರ ಸಾಲಿನ ೨.೩ ಕೋಟಿ ಐಟಿ ರಿಟರ್ನ್‌ಗಳು ಸಲ್ಲಿಕೆಯಾಗಿವೆ. ಸಂಖ್ಯೆ ಏರಿಕೆಯೂ ಆಗುತ್ತಿದೆ. ಕಳೆದ ೨೦೨೦-೨೧ರ ಸಾಲಿನಲ್ಲಿ ೫.೮೯ ಕೋಟಿ ಐಟಿಆರ್ ಸಲ್ಲಿಕೆಯಾಗಿದೆ. ಐಟಿ ರಿಟರ್ನ್ ಸಲ್ಲಿಕೆಯ ಗಡುವು ವಿಸ್ತರಣೆ ವಾಡಿಕೆ ಎಂಬಂತಾಗಿದೆ. ಹೀಗಾಗಿ ಜನ ನಿಧಾನಗತಿಯಲ್ಲಿ ರಿಟರ್ನ್ ಸಲ್ಲಿಸುತ್ತಿದ್ದಾರೆ. ಆದರೆ ಈಗ ದಿನಕ್ಕೆ ೧೫ ಲಕ್ಷದಿಂದ ೧೮ ಲಕ್ಷ ರಿಟರ್ನ್ ಸಲ್ಲಿಕೆಯಾಗುತ್ತಿದೆ. ಇದು ೨೫-೩೦ ಲಕ್ಷ ಸರಾಸರಿಗೆ ಏರಿಕೆಯಾಗಲಿದೆ ಎಂದು ತಿಳಿಸಿದರು.
ಕಳೆದ ಸಲ ೯-೧೯% ರಿಟರ್ನ್‌ಗಳು ಕೊನೆಯ ದಿನ ಸಲ್ಲಿಕೆಯಾಗಿದೆ. ಅಂದರೆ ಕೊನೆಯ ದಿನ ೫೦ ಲಕ್ಷ ರಿಟರ್ನ್ ಸಲ್ಲಿಕೆಯಾಗಿದೆ. ಈ ಸಲ ಕೊನೆಯ ದಿನ ೧ ಕೋಟಿ ಸಲ್ಲಿಕೆಯಾಗುವ ಸಾಧ್ಯತೆ ಇದ್ದು ರೆಡಿಯಾಗಿರಲು ಐಟಿ ಸಿಬ್ಬಂದಿಗೆ ಸೂಚಿಸಲಾಗಿದೆ. ಸದ್ಯಕ್ಕೆ ಗಡುವು ವಿಸ್ತರಿಸುವ ಪರಿಶೀಲನೆ ಇಲ್ಲ ಎಂದರು.
ಆದಾಯ ತೆರಿಗೆ ಇಲಾಖೆ ೭ ಮಾದರಿಯ ಐಟಿ ರಿಟರ್ನ್‌ಗಳನ್ನು ಸಿದ್ಧಪಡಿಸಿದೆ. ವ್ಯಕ್ತಿಯ ಆದಾಯ ಮತ್ತು ಆದಾಯದ ಮೂಲವನ್ನು ಆಧರಿಸಿ ಇದು ವ್ಯತ್ಯಾಸವಾಗುತ್ತದೆ. ವೇತನದಾರರು, ಸಣ್ಣ ಬಿಸಿನೆಸ್ ಮಾಡುವವರು, ವೃತ್ತಿಪರರಿಗೆ ೨೦೨೧-೨೨ರ ಐಟಿಆರ್ ಸಲ್ಲಿಕೆಗೆ ಜುಲೈ ೩೧ ಕೊನೆಯ ದಿನವಾಗಿದೆ.
ಜುಲೈ ೩೧ರ ಗಡುವು ತಪ್ಪಿದರೆ ಏನಾಗುತ್ತದೆ? ವಿಳಂಬಿತ ಐಟಿ ರಿಟರ್ನ್ ಅನ್ನು ಆಗಸ್ಟ್ ೧ ಮತ್ತು ಡಿಸೆಂಬರ್ ೩೧ರೊಳಗೆ ಸಲ್ಲಿಸಬಹುದು. ೧,೦೦೦ ರೂ.ಗಳಿಂದ ೫,೦೦೦ ರೂ. ತನಕ ದಂಡ ಪಾವತಿಸಬೇಕಾಗಿ ಬರಬಹುದು.
ಇದನ್ನೂ ಓದಿ: ವಿಸ್ತಾರ Money Guide: ಐಟಿ ರಿಟರ್ನ್ ಸಲ್ಲಿಕೆಗೆ ಜುಲೈ 31 ಕೊನೆ ದಿನ, ರೆಡಿಯಾಗಿದ್ದೀರಾ?