ನವ ದೆಹಲಿ: ಅದಾನಿ ಸಮೂಹದ ಕಂಪನಿಗಳ ಷೇರುಗಳಲ್ಲಿ ಎಲ್‌ಐಸಿ ಹೂಡಿಕೆ ಬಗ್ಗೆ ಕಳವಳ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ವಿವರಣೆ ನೀಡಿದ್ದು, (Adani stocks) ನಿಯಮಾವಳಿಗಳ ಅಡಿಯಲ್ಲಿಯೇ ಹೂಡಿಕೆ ಮಾಡಿರುವುದಾಗಿ ಎಲ್‌ಐಸಿ ತಿಳಿಸಿರುವುದಾಗಿ ಹೇಳಿದೆ. ಕಳೆದ ವಾರ ಎಲ್‌ಐಸಿ ನೀಡಿದ್ದ ಹೇಳಿಕೆಯಲ್ಲಿ, 35,917 ಕೋಟಿ ರೂ.ಗಳನ್ನು ಅದಾನಿ ಸಮೂಹದ ಕಂಪನಿಗಳ ಷೇರು, ಬಾಂಡ್‌ಗಳಲ್ಲಿ ಹೂಡಿಕೆ ಮಾಡಿರುವುದಾಗಿ ತಿಳಿಸಿತ್ತು. ಇದು ಎಲ್‌ಐಸಿಯ ನಿರ್ವಹಣೆಯ ಅಡಿಯಲ್ಲಿರುವ 41.66 ಲಕ್ಷ ಕೋಟಿ ರೂ. ಆಸ್ತಿಯಲ್ಲಿ 0.975% ಪಾಲು. ಅಂದರೆ ಒಂದು ಪರ್ಸೆಂಟಿಗಿಂತಲೂ ಕಡಿಮೆ ಎಂದು ತಿಳಿಸಿತ್ತು. ಎಲ್‌ಐಸಿಯು ಅದಾನಿ ಸಮೂಹದಲ್ಲಿ ಹೂಡಿರುವ 30,127 ಕೋಟಿ ರೂ.ಗಳ ಮೌಲ್ಯವು 2023 ಜನವರಿ 27ರ ವೇಳೆಗೆ 56,142 ಕೋಟಿ ರೂ.ಗೆ ಏರಿದೆ. ಆದ್ದರಿಂದ ಹೂಡಿಕೆಗೆ ಯಾವುದೇ ಅಪಾಯ ಉಂಟಾಗಿಲ್ಲ. ಎಲ್‌ಐಸಿಯು ತನ್ನ ಕಾಯಿದೆಯ ಅಡಿಯಲ್ಲಿ ಮತ್ತು ಐಆರ್‌ಡಿಎ ಹೂಡಿಕೆಯ ನಿಬಂಧನೆಗಳ ಪ್ರಕಾರವೇ ಹೂಡಿಕೆ ಮಾಡಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಭಾಗವತ್ ಕರಾಡ್ ಅವರು ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.
ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಅವರು ಎಲ್‌ಐಸಿಯು ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆಗಳ ವಿವರ ಕೋರಿದ್ದಕ್ಕೆ ಕರಾಡ್ ಅವರು ವಿವರಿಸಿದರು. ಎಲ್‌ಐಸಿ ನೀಡಿರುವ ಮಾಹಿತಿ ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದೆ ಎಂದರು.
ಅದಾನಿ ಸಮೂಹವು ಷೇರು ಮಾರುಕಟ್ಟೆಯಲ್ಲಿ 10 ಕಂಪನಿಗಳನ್ನು ನೋಂದಾಯಿಸಿದೆ. ಜನವರಿ 24ರಂದು ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ವರದಿ ಪ್ರಕಟಿಸಿದ ಬಳಿಕ ಷೇರುಗಳ ದರ ಕುಸಿದಿತ್ತು. ಆದರೆ ಮಂಗಳವಾರ ಮತ್ತೆ ಅದಾನಿ ಷೇರುಗಳು ಚೇತರಿಸಿವೆ.