ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಪ್ರಿಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್‌ಗಳಿಗೆ ( Prepaid Payment Instruments-PPIs) ಸಂಬಂಧಿಸಿ ನೀಡಿರುವ ಸೂಚನೆಯಲ್ಲಿ, ಜುಲೈ ೧ರಿಂದ ಬ್ಯಾಂಕೇತರ ಸಂಸ್ಥೆಗಳು ಇಂಥ ವ್ಯಾಲೆಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳ ಮೂಲಕ ಸಾಲ ವಿತರಿಸುವಂತಿಲ್ಲ ಎಂದು ತಿಳಿಸಿದೆ.
ಇದರ ಪರಿಣಾಮ ಲೇಜಿ ಪೇ (LazyPay), ಜ್ಯುಪಿಟರ್ ಮುಂತಾದ ಫಿನ್‌ಟೆಕ್ ಸ್ಟಾರ್ಟಪ್‌ಗಳ ವ್ಯವಹಾರಗಳಿಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಆದರೆ ಬ್ಯಾಂಕ್‌ಗಳ ಜತೆಗೆ ಸಹಭಾಗಿತ್ವ ಹೊಂದಿರುವ ( co-branded card) ಫಿನ್‌ಟೆಕ್ ಸ್ಟಾರ್ಟಪ್‌ಗಳಿಗೆ ಸಮಸ್ಯೆಯಾಗುವುದಿಲ್ಲ.
ಆರ್‌ಬಿಐ ಪ್ರಕಾರ ಪ್ರಿಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್‌ಗಳು ಬಳಕೆದಾರರಿಗೆ ಸರಕು ಮತ್ತು ಸೇವೆಗಳ ಖರೀದಿ ವೇಳೆ ಹಣದ ಪಾವತಿಗೆ ಮಾತ್ರ ಬಳಕೆಯಾಗುತ್ತವೆ. ಹಣದ ಸ್ವೀಕೃತಿಗೂ ( remittance) ಬಳಸಬಹುದು. ಆದರೆ ಇವುಗಳನ್ನು ಸಾಲ ವಿತರಿಸಲು ಬ್ಯಾಂಕೇತರ ಸಂಸ್ಥೆಗಳು ಬಳಸುವಂತಿಲ್ಲ.
ಇದರ ಪರಿಣಾಮ ಕಾರ್ಡ್ ಆಧಾರಿತ ಫಿನ್‌ಟೆಕ್‌ಗಳಿಗೆ ತಮ್ಮ ಗ್ರಾಹಕರಿಗೆ ಸಾಲ ವಿತರಿಸಲು ಸಾಧ್ಯವಾಗುವುದಿಲ್ಲ. buy now, pay later ಮಾದರಿಯ ಸಾಲದ ವಹಿವಾಟು ನಡೆಸಲು ಸಾಧ್ಯವಾಗುವಿದಿಲ್ಲ. ಡಿಜಿಟಲ್ ಸಾಲ ವಿತರಕ ಸಂಸ್ಥೆಗಳ ಸಂಖ್ಯೆ (digital lending players) ಹೆಚ್ಚುತ್ತಿರುವ ಸಂದರ್ಭದಲ್ಲಿ ಆರ್‌ಬಿಐ ಹೊರಡಿಸಿರುವ ಈ ಸೂಚನೆ ಗಮನಾರ್ಹವಾಗಿದೆ. ಕಳೆದ ವಾರವಷ್ಟೇ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಡಿಜಿಟಲ್ ಸಾಲ ವಿತರಣೆಯನ್ನು ವ್ಯವಸ್ಥಿತವಾಗಿ ನಿಯಂತ್ರಿಸಲಾಗುವುದು ಎಂದು ತಿಳಿಸಿದ್ದರು.