Site icon Vistara News

NPS Withdrawal rule : ಎನ್‌ಪಿಎಸ್‌ ವಿತ್‌ಡ್ರಾವಲ್‌ ನಿಯಮದಲ್ಲಿ ಶೀಘ್ರ ಭಾರಿ ಬದಲಾವಣೆ

cash

ನವ ದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆ (National Pension System-NPS) ಅಡಿಯಲ್ಲಿ ಹೂಡಿಕೆಯನ್ನು ಹಿಂತೆಗೆದುಕೊಳ್ಳುವ ವಿಧಾನದಲ್ಲಿ ಶೀಘ್ರ ಮಹತ್ವದ ಬದಲಾವಣೆ ನಡೆಯಲಿದೆ ಎಂದು ಪೆನ್ಷನ್‌ ಫಂಡ್‌ ರೆಗ್ಯುಲೇಟರಿ & ಡೆವಲಪ್‌ಮೆಂಟ್‌ ಅಥಾರಿಟಿ (Pension Fund Regulatory and Development Authority-PFRDA) ಚೇರ್ಮನ್‌ ದೀಪಕ್‌ ಮೊಹಾಂತಿ ತಿಳಿಸಿದ್ದಾರೆ. ಹಾಗಾದರೆ ಏನದು ಹೊಸ ಬದಲಾವಣೆ?

ಎನ್‌ಪಿಎಸ್‌ನಲ್ಲಿ ಅವಧಿಗೆ ಮುನ್ನ ನಿಯಮಿತವಾಗಿ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಕೂಡ ಅವಕಾಶ ಸಿಗಲಿದೆ. (Systematic Lumpsum Withdrawal ) ಇದರೊಂದಿಗೆ ಎನ್‌ಪಿಎಸ್‌ ಚಂದಾದಾರರು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದಲ್ಲಿ 75 ವರ್ಷ ವಯಸ್ಸಿನ ತನಕ ವಿತ್‌ ಡ್ರಾವಲ್‌ ಮಾಡಬಹುದು.

ಎನ್‌ಪಿಎಸ್‌ ವಿತ್‌ಡ್ರಾವಲ್:‌ ಈಗಿನ ನಿಯಮವೇನು?

ಈಗ ಎನ್‌ಪಿಎಸ್‌ ಚಂದಾದಾರ 60 ವರ್ಷ ವಯಸ್ಸಾದಾಗ ನಿವೃತ್ತಿ ನಿಧಿಯಲ್ಲಿ 60% ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಉಳಿದ 40% ಆನ್ಯುಯಿಟಿ ಖರೀದಿಗೆ ಬಳಕೆಯಾಗುತ್ತದೆ. (annuity) ಚಂದಾದಾರರು ಲಂಪ್ಸಮ್‌ ಹಿಂತೆಗೆತವನ್ನು 75 ವರ್ಷದ ತನಕವೂ ಮುಂದೂಡಬಹುದು. ಚಂದಾದಾರರು ವಾರ್ಷಿಕವಾಗಿ ಹಂತಗಳಲ್ಲಿ ವಿತ್‌ ಡ್ರಾವಲ್‌ ಮಾಡಲೂ ಅವಕಾಶ ಸಿಗಲಿದೆ. ಈ ವಿತ್‌ ಡ್ರಾವಲ್ಸ್‌ ಹೊರತಾಗಿಯೂ ಉಳಿದ ಮೊತ್ತ ಹೂಡಿಕೆಯಾಗಿ ಇರುವುದರಿಂದ ಚಂದಾದಾರರಿಗೆ ಹೂಡಿಕೆಯನ್ನು ಪೂರ್ಣವಾಗಿ ಹಿಂತೆಗೆದುಕೊಳ್ಳುವ ತನಕ ರಿಟರ್ನ್‌ ನೀಡಲಿದೆ.

ಹೊಸ ಬದಲಾವಣೆಯಲ್ಲಿ ಚಂದಾದಾರರು 60 ವರ್ಷವಾದಾಗ 60% ಹಣವನ್ನು ಮುಂದಿನ 15 ವರ್ಷಗಳ ಕಾಲ, ಅಂದರೆ ಅವರಿಗೆ 75 ವರ್ಷ ಆಗುವ ತನಕ ಮಾಸಿಕ, ತ್ರೈಮಾಸಿಕ ಅವಧಿಯಲ್ಲೂ ಹಿಂತೆಗೆದುಕೊಳ್ಳಲು ಅವಕಾಶ ಸಿಗಲಿದೆ. ‌

ಏನಿದು ಎನ್‌ಪಿಎಸ್?

ಕೇಂದ್ರ ಸರ್ಕಾರ 2003ರಲ್ಲಿ ಪರಿಚಯಿಸಿದ ಎನ್‌ಪಿಎಸ್‌ ಅನ್ನು 2004ರ ಜನವರಿ 1ರ ಬಳಿಕ ಎಲ್ಲ ಸರ್ಕಾರಿ ಉದ್ಯೋಗಿಗಳಿಗೆ ಅನ್ವಯಿಸಲಾಗಿದೆ. ಪೆನ್ಷನ್‌ ಫಂಡ್‌ ರೆಗ್ಯುಲೇಟರಿ ಆಂಡ್‌ ಡೆವಲಪ್‌ಮೆಂಟ್‌ ಅಥಾರಿಟಿ ಇದನ್ನು ವಿನ್ಯಾಸಗೊಳಿಸಿದೆ. 2009ರಲ್ಲಿ ಎಲ್ಲ ನಾಗರಿಕರಿಗೂ ಇದನ್ನು ವಿಸ್ತರಿಸಲಾಯಿತು. ಖಾಸಗಿ ವಲಯದ ಉದ್ಯೋಗಿಗಳೂ, ಸ್ವ ಉದ್ಯೋಗಿಗಳೂ ಇದರಲ್ಲಿ ಹೂಡಿಕೆ ಮಾಡಬಹುದು. ಸರ್ಕಾರ ಉದ್ಯೋಗಿಗಳಾದರೆ ಮೂಲವೇತನದ 10% ಅನ್ನು ಉದ್ಯೋಗಿ ತನ್ನ ವೇತನದಲ್ಲಿ ನೀಡಬೇಕು. ಸರ್ಕಾರ ಇದಕ್ಕೆ 14% ಸೇರಿಸುತ್ತದೆ. ಇದು ಮಾರುಕಟ್ಟೆ ಆಧರಿತವಾಗಿದ್ದು, ನಿರ್ದಿಷ್ಟ ಪಾಲನ್ನು ಷೇರು, ಬಾಂಡ್‌ ಸೇರಿದಂತೆ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಎಸ್‌ಬಿಐ, ಎಲ್‌ಐಸಿ ಮತ್ತು ಯುಟಿಐ ಮತ್ತು ಇತರ ಸಂಸ್ಥೆಗಳು ಇದರ ಫಂಡ್‌ ಮ್ಯಾನೇಜರ್‌ಗಳಾಗಿವೆ.

ಎನ್‌ಪಿಎಸ್‌ನಲ್ಲಿ ಟೈರ್‌ 1 ಮತ್ತು ಟೈರ್‌ 2 ಎಂಬ ಎರಡು ಆಯ್ಜೆಗಳಿದೆ. ಟೈರ್‌ 1 ಪ್ರೈಮರಿ ಖಾತೆಯಾಗಿದ್ದು, ಹೂಡಿಕೆಯ ಖಾತೆಯಾಗಿದೆ. ಟೈರ್‌ 1 ಖಾತೆಯಲ್ಲಿ ವರ್ಷಕ್ಕೆ ಕನಿಷ್ಠ 1000 ರೂ. ಹೂಡಿಕೆ ಅಗತ್ಯ. ವಾರ್ಷಿಕ 1.5 ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಟೈರ್-‌2 ಖಾತೆಯಲ್ಲಿ ಹೂಡಿಕೆಗೆ ಮಿತಿ ಇಲ್ಲ. ಇದು ಮ್ಯೂಚುವಲ್‌ ಫಂಡ್‌ನಂತೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: NPS Committee: ಎನ್‌ಪಿಎಸ್‌ ಪರಾಮರ್ಶೆಗೆ ಸಮಿತಿ ರಚನೆ; ಕೇಂದ್ರಕ್ಕೆ ಅರುಣ ಶಹಾಪೂರ ಧನ್ಯವಾದ

Exit mobile version