ಮುಂಬಯಿ: ಅದಾನಿ ಸಮೂಹದ ಮೂರು ಕಂಪನಿಗಳ ಷೇರುಗಳ ಮೇಲೆ ಎನ್‌ಎಸ್‌ಇ ಮತ್ತು ಬಿಎಸ್‌ಇ ಅಲ್ಪಾವಧಿಗೆ ಹೆಚ್ಚುವರಿ ನಿಗಾ ವಹಿಸಲಿವೆ. (Adani Group shares) ಅಲ್ಪಾವಧಿಯ ಹೆಚ್ಚುವರಿ ನಿಗಾ ಕುರಿತ ನಿಯಮಾವಳಿಗಳ ಅಡಿಯಲ್ಲಿ ಸೆಬಿ ಈ ನಿರ್ಧಾರ ಕೈಗೊಂಡಿದೆ. ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಅಂಬುಜಾ ಸಿಮೆಂಟ್ ಷೇರು ದರದ ಮೇಲೆ ನಿಗಾ ವಹಿಸಿದೆ.
ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಕೂಡ ಅದಾನಿ ಸಮೂಹದ ಷೇರುಗಳ ಚಲನವಲನಗಳ ಮೇಲೆ ನಿಗಾ ವಹಿಸುತ್ತಿದೆ. ಯಾವುದೇ ಅಸಾಧಾರಣ ವ್ಯತ್ಯಾಸ ಕಂಡು ಬಂದರೆ ತಿಳಿಸುವಂತೆ ಸೆಬಿಯು ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ಅದಾನಿ ಸಮೂಹವು ಹಿಂಡೆನ್ ಬರ್ಗ್ ವರದಿಯ ಬಳಿಕ ತನ್ನ ಷೇರು ಮಾರುಕಟ್ಟೆ ಮೌಲ್ಯದಲ್ಲಿ 8.8 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದೆ. ಅದಾನಿ ಪೋರ್ಟ್ಸ್ ಮತ್ತು ಅಂಬುಜಾ ಸಿಮೆಂಟ್ ಷೇರುಗಳನ್ನು ಎನ್‌ಎಸ್‌ಇ ಶುಕ್ರವಾರ ತನ್ನ ಫ್ಯೂಚರ್ಸ್ & ಆಪ್ಷನ್ಸ್ (F&O) ವಹಿವಾಟಿನಲ್ಲಿ ನಿಷೇಧಿಸಿದೆ. ಮಾರುಕಟ್ಟೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರು ದರ ತೀವ್ರ ಕುಸಿತಕ್ಕೀಡಾಗಿದೆ. ಈ ನಡುವೆ ಗ್ಲೋಬಲ್ ಇಂಡೆಕ್ಸ್ ಎಸ್ &ಪಿ ಡವ್ ಜಾನ್ಸ್ ಗುರುವಾರ ಅದಾನಿ ಎಂಟರ್‌ಪ್ರೈಸಸ್ ಷೇರುಗಳನ್ನು ರದ್ದುಪಡಿಸುವುದಾಗಿ ತಿಳಿಸಿದೆ.
ಅದಾನಿ ರ‍್ಯಾಂಕಿಂಗ್ 21ಕ್ಕೆ ಕುಸಿತ:
ಫೋರ್ಬ್ಸ್ ರ‍್ಯಾಂಕಿಂಗ್‌ನಲ್ಲಿ ಗೌತಮ್ ಅದಾನಿ ಅವರ ರ‍್ಯಾಂಕ್ 17ಕ್ಕೆ ಹಾಗೂ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ 21ಕ್ಕೆ ಇಳಿಕೆಯಾಗಿದೆ.
ಅದಾನಿ ರೇಟಿಂಗ್ ಅಬಾಧಿತ ಎಂದ ಫಿಚ್: ಅದಾನಿ ಗ್ರೂಪ್‌ನ ಷೇರುಗಳ ಕುಸಿತ ಆಗಿದ್ದರೂ, ಸದ್ಯಕ್ಕೆ ಅದರ ರೇಟಿಂಗ್ ಅನ್ನು ಇಳಿಸುವಷ್ಟು ತೀವ್ರ ಪ್ರಭಾವ ಬೀರಿಲ್ಲ ಎಂದು ಫಿಚ್ ರೇಟಿಂಗ್ ತಿಳಿಸಿದೆ. ಈ ವರದಿಯ ಬೆನ್ನಲ್ಲೇ ಅದಾನಿ ಪೋರ್ಟ್ಸ್ ಷೇರು ದರ 52 ವಾರಗಳ ಕನಿಷ್ಠ ಮಟ್ಟಕ್ಕಿಂತ ಮೇಲಕ್ಕೆ ಸುಧಾರಿಸಿತು. ಕಂಪನಿಯ ಮಾರುಕಟ್ಟೆ ಮೌಲ್ಯ 1 ಲಕ್ಷ ಕೋಟಿ ರೂ.ಗಳಿಗೆ ಏರಿತು. 394 ರೂ.ಗಳ ಕೆಳಮಟ್ಟಕ್ಕೆ ಕುಸಿದಿದ್ದ ಷೇರು ದರ ಬಿಎಸ್ ಇನಲ್ಲಿ 493ಕ್ಕೆ ಏರಿತ್ತು.