ನವ ದೆಹಲಿ: ರಷ್ಯಾ ಸತತ ಎರಡನೇ ತಿಂಗಳಿಗೆ ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲವನ್ನು ನವೆಂಬರ್ನಲ್ಲಿ (Oil from Russia) ಪೂರೈಸಿದೆ. ಇದರೊಂದಿಗೆ ಇರಾಕ್ ಮತ್ತು ಸೌದಿ ಅರೇಬಿಯಾವನ್ನು ಹಿಂದಿಕ್ಕಿದೆ.
ಎನರ್ಜಿ ಕಾರ್ಗೊ ಟ್ರ್ಯಾಕರ್ ವೊರ್ಟೆಕ್ಸಾ ಪ್ರಕಾರ, ರಷ್ಯಾ ನವೆಂಬರ್ನಲ್ಲಿ ದಿನಕ್ಕೆ ಸರಾಸರಿ 909,400 ಬ್ಯಾರೆಲ್ನಷ್ಟು ಕಚ್ಚಾ ತೈಲವನ್ನು ಪೂರೈಸಿದೆ. ಅಂದರೆ ದೇಶದ 21% ಕಚ್ಚಾ ತೈಲ ಆಮದನ್ನು ಭರಿಸಿದೆ. ಕಳೆದ ಅಕ್ಟೋಬರ್ನಲ್ಲಿ 902,740 ಬ್ಯಾರೆಲ್ ಕಚ್ಚಾ ತೈಲವನ್ನು ಪೂರೈಸಿತ್ತು. ಇದು ಇತರ ಎಲ್ಲ ರಫ್ತುದಾರರಿಗಿಂತ ಹೆಚ್ಚು.
ಭಾರತವು ತನ್ನ ಇಂಧನ ಬೇಡಿಕೆಯ ಅಗತ್ಯಗಳಿಗೆ ಅನುಗುಣವಾಗಿ, ರಷ್ಯಾ ಸೇರಿದಂತೆ ಜಗತ್ತಿನ ನಾನಾ ದೇಶಗಳಿಂದ ಕಚ್ಚಾ ತೈಲ ಆಮದನ್ನು ಮುಂದುವರಿಸಲಿದೆ (Oil from Russia) ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಐರೋಪ್ಯ ಒಕ್ಕೂಟದ 27 ದೇಶಗಳು ಡಿಸೆಂಬರ್ 5ರಿಂದ ರಷ್ಯಾದ ಕಚ್ಚಾ ತೈಲಕ್ಕೆ ಬ್ಯಾರೆಲ್ಗೆ 60 ಡಾಲರ್ನ ಮಿತಿಯನ್ನು ವಿಧಿಸಿದೆ. ಇರಾನ್ ಮತ್ತು ವೆನಿಜುವೆಲಾ ಹೊರತುಪಡಿಸಿ ಉಳಿದ ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಹಡಗು, ವಿಮೆ ಮತ್ತು ಹಣಕಾಸು ವ್ಯವಸ್ಥೆ ಹೊಂದಿರುವವರು ತೈಲ ಖರೀದಿಸಬಹುದು. ಭಾರತವು ರಷ್ಯಾದಿಂದಲೂ ತೈಲ ಖರೀದಿಸುವುದನ್ನು ಮುಂದುವರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಆಮದುದಾರರಿಗೆ ರಷ್ಯಾದಿಂದ ಖರೀದಿಸದಿರಿ ಎಂದು ಯಾರೂ ನಿರ್ಬಂಧ ವಿಧಿಸುತ್ತಿಲ್ಲ. ಭಾರತಕ್ಕೆ ತೈಲ ಪೂರೈಕೆ ಮಾಡುವ ಮೂಲಗಳಲ್ಲಿ ರಷ್ಯಾ ಒಂದು ಮಾತ್ರ. ಒಟ್ಟು 30 ದೇಶಗಳಿಂದ ಭಾರತವು ತೈಲ ಖರೀದಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.