ನವ ದೆಹಲಿ: ಸೌದಿ ಅರೇಬಿಯಾ ಹಾಗೂ ಒಪೆಕ್ ಪ್ಲಸ್ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದರೂ, ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ 90 ಡಾಲರ್ ಗಡಿ ದಾಟದು ಎಂದು ಭಾರತೀಯ ತೈಲ ಸಂಸ್ಕರಣೆ ವಲಯದ ಕಂಪನಿಗಳು ತಿಳಿಸಿವೆ. ಒಪೆಕ್ ಪ್ಲಸ್ ತೈಲೋತ್ಪಾದನೆ ಕಡಿತದ ಪರಿಣಾಮ ( Crude oil price) ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 84 ಡಾಲರ್‌ಗೆ ಏರಿತ್ತು. ಈ ಒಕ್ಕೂಟದಲ್ಲಿ ಸುಮಾರು ಎರಡು ಡಜನ್ ರಾಷ್ಟ್ರಗಳು ಇವೆ. ಜಾಗತಿಕ ತೈಲೋತ್ಪಾದನೆಯ 40% ನಿಯಂತ್ರಣವನ್ನು ಇದು ಒಳಗೊಂಡಿದೆ.
ಸೌದಿ ಅರೇಬಿಯಾ ಮತ್ತು ಇತರ ಒಪೆಕ್ ಪ್ಲಸ್ ತೈಲೋತ್ಪಾದಕರು ಸ್ವಯಂಪ್ರೇರಣೆಯಿಂದ ಉತ್ಪಾದನೆ ಕಡಿತವನ್ನು ಭಾನುವಾರ ಘೋಷಿಸಿವೆ. ( Oil production) ಇದರ ಪರಿಣಾಮ ಕಚ್ಚಾ ತೈಲದ ದರದಲ್ಲಿ ಬ್ಯಾರೆಲ್‌ಗೆ 10 ಡಾಲರ್ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾ ಮೇಯಿಂದ 2023 ಅಂತ್ಯದ ತನಕ ದಿನದ ಉತ್ಪಾದನೆಯಲ್ಲಿ 500,000 ಬ್ಯಾರೆಲ್ (barrels) ಕಡಿತ ಮಾಡುವುದಾಗಿ ಘೋಷಿಸಿದೆ. ಉತ್ಪಾದನೆ ಕಡಿತ ಘೋಷಣೆಯ ಬೆನ್ನಲ್ಲೇ ಬ್ರೆಂಟ್ ಕಚ್ಚಾ ತೈಲ ದರದಲ್ಲಿ ಬ್ಯಾರೆಲ್‌ಗೆ 5 ಡಾಲರ್ ದರ ಏರಿಕೆಯಾಗಿದೆ. ಅಂದರೆ 84 ಡಾಲರ್ ಗಡಿ ಮುಟ್ಟಿದೆ. ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್ ಕಾಂಟ್ರ್ಯಾಕ್ಟ್ ದರ 80 ಡಾಲರ್‌ಗೆ ಏರಿದೆ.
ರಷ್ಯಾದ ಉಪ ಪ್ರಧಾನಿ ಕೂಡ 2023ರ ಅಂತ್ಯದ ತನಕ ತೈಲೋತ್ಪಾದನೆಯನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ರಷ್ಯಾ ಕೂಡ ದಿನಕ್ಕೆ 500,000 ಬ್ಯಾರಲ್ ಲೆಕ್ಕದಲ್ಲಿ ಉತ್ಪಾದನೆ ತಗ್ಗಿಸಲು ನಿರ್ಧರಿಸಿದೆ. ಯುಎಇ, ಕುವೈತ್, ಇರಾಕ್, ಒಮಾನ್, ಅಲ್ಜೀರಿಯಾ ಕೂಡ ಇದೇ ಅವಧಿಯಲ್ಲಿ ಉತ್ಪಾದನೆ ಕಡಿತಗೊಳಿಸುವುದಾಗಿ ತಿಳಿಸಿವೆ.
ಯುಎಇ ದಿನದ ಉತ್ಪಾದನೆಯಲ್ಲಿ 144,000 ಬ್ಯಾರೆಲ್, ಕುವೈತ್ 128,000 ಬ್ಯಾರೆಲ್, ಇರಾಕ್ 211,000 ಬ್ಯಾರೆಲ್, ಒಮಾನ್ 40,000 ಬ್ಯಾರೆಲ್, ಅಲ್ಜೀರಿಯಾ 48,000 ಬ್ಯಾರೆಲ್ ಕಡಿತಗೊಳಿಸುವುದಾಗಿ ತಿಳಿಸಿದೆ. ಮಾರುಕಟ್ಟೆಯಲ್ಲಿ ತೈಲ ದರವನ್ನು ಸ್ಥಿರವಾಗಿಸಲು ಈ ಕ್ರಮ ಅನಿವಾರ್ಯ ಎಂದು ಸೌದಿ ಅರೇಬಿಯಾ ಹೇಳಿದೆ. ರಾಯ್ಟರ್ಸ್ ಪ್ರಕಾರ ಒಟ್ಟಾರೆಯಾಗಿ ದಿನದ ಸರಾಸರಿ ಉತ್ಪಾದನೆಯಲ್ಲಿ 36.6 ಲಕ್ಷ ಬ್ಯಾರೆಲ್ ಕಡಿತವಾಗಲಿದೆ. ಅಂದರೆ ಜಾಗತಿಕ ಬೇಡಿಕೆಯ 3.7%ರಷ್ಟು. ಅಮೆರಿಕವು ತೈಲ ದರ ಇಳಿಸಲು ಉತ್ಪಾದನೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದೆ.