ನವ ದೆಹಲಿ: ಓಲಾ ಎಲೆಕ್ಟ್ರಿಕ್ (Ola Electric) ತನ್ನ ಗ್ರಾಹಕರಿಗೆ ಎಸ್1 ಸ್ಕೂಟರ್‌ನ ಮುಂಭಾಗದ ಬಿಡಿಭಾಗವನ್ನು (front fork arm) ಉಚಿತವಾಗಿ ಬದಲಿಸುವ ಆಯ್ಕೆಯನ್ನು ನೀಡಿದೆ. ಈ ಬಿಡಿಭಾಗವು ರಸ್ತೆಯಲ್ಲೇ ಕಳಚಿ ಬೀಳುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕಂಪನಿ ಈ ಆಫರ್ ನೀಡಿದೆ. ಈ ಸಂಬಂಧ ಓಲಾ ಎಲೆಕ್ಟ್ರಿಕ್ ಮಂಗಳವಾರ ಹೇಳಿಕೆ ಬಿಡುಗಡೆಗೊಳಿಸಿದೆ.
ಫ್ರಂಟ್ ಫೋರ್ಕ್ ಆರ್ಮ್ ವಾಹನ ಮತ್ತು ಅದರ ಚಕ್ರದ ನಡುವೆ ಇರುವ ಪ್ರಮುಖ ಬಿಡಿಭಾಗವಾಗಿದೆ. ಆದರೆ ಈ ಬಗ್ಗೆ ಬಳಕೆದಾರರಲ್ಲಿರುವ ಆತಂಕ ನಿವಾರಣೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಹೊಸ ಬಿಡಿಭಾಗವನ್ನು ಒದಗಿಸಲು ಬದ್ಧವಿರುವುದಾಗಿ ಕಂಪನಿ ತಿಳಿಸಿದೆ.
ಓಲಾ ಎಲೆಕ್ಟ್ರಿಕ್ ಇದುವರೆಗೆ 2 ಲಕ್ಷ ಎಸ್1 ಮತ್ತು ಎಸ್ 1 ಪ್ರೊ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಕಳೆದ ಏಪ್ರಿಲ್‌ನಲ್ಲಿ ಓಲಾ ಸ್ವಯಂಪ್ರೇರಿತವಾಗಿ 1441 ಸ್ಕೂಟರ್‌ಗಳನ್ನು ಹಿಂತೆಗೆದುಕೊಂಡಿತ್ತು. ಈ ಹಿಂದೆ ಬಿಡಿಭಾಗ ಕಳಚಿಬಿದ್ದ ಉದಾಹರಣೆಗಳು ನಡೆದಿದ್ದರಿಂದ ಕಂಪನಿ ಈ ಕ್ರಮ ಕೈಗೊಂಡಿದೆ. ಈ ಘಟನೆಗಳ ಹೊರತಾಗಿಯೂ ಇತ್ತೀಚಿನ ತಿಂಗಳುಗಳಲ್ಲಿ ಓಲಾ ಸ್ಕೂಟರ್ ಮಾರಾಟ ದಾಖಲೆಯ ಮಟ್ಟದಲ್ಲಿ ಸುಧಾರಿಸಿದೆ.