ನವದೆಹಲಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇತ್ತೀಚೆಗೆ ಬೆಂಕಿ ಆಕಸ್ಮಿಕಗಳಿಗೆ ಸಿಲುಕಿ ಸುದ್ದಿಯಾಗಿತ್ತು. ಈಗ ಮತ್ತೊಂದು ಎಡವಟ್ಟು ಸಂಭವಿಸಿದೆ. ಚಲಿಸುತ್ತಿರುವಾಗಲೇ ಸ್ಕೂಟರ್‌ನ ಮುಂಭಾಗದ ಸಸ್ಪೆನ್ಷನ್ ಮುರಿದು ಬಿದ್ದ ಘಟನೆ ವರದಿಯಾಗಿದೆ.
ಸ್ಕೂಟರ್‌ನ ಸಸ್ಪೆನ್ಷನ್ ಮುರಿದು ಟೈರ್ ಸಮೇತ ಬೇರ್ಪಟ್ಟು ಬಿದ್ದಿರುವ ಚಿತ್ರ ಟ್ವಿಟರ್ ಮತ್ತು ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಕೂಟರ್ ಅನ್ನು ಚಲಾಯಿಸುತ್ತಿರುವ ವೇಳೆಯಲ್ಲಿಯೇ ಸಸ್ಪೆನ್ಷನ್ ಕಳಚಿ ಬಿದ್ದಿದೆ ಎನ್ನಲಾಗಿದೆ.
“ಸ್ಕೂಟರ್ ಅನ್ನು ಸಾಮಾನ್ಯ ವೇಗದಲ್ಲಿ ಚಲಾಯಿಸುತ್ತಿರುವಾಗಲೇ ಈ ಅವಘಡ ಸಂಭವಿಸಿದೆ. ಈ ಸ್ಕೂಟರ್‌ನ ವಿನ್ಯಾಸವನ್ನು ಬದಲಿಸಬೇಕು. ಸುರಕ್ಷತೆಗೆ ಆದ್ಯತೆ ನೀಡಬೇಕು. ಕಳಪೆ ಲೋಹಗಳನ್ನು ಬಳಸಿ ಇಂಥ ವಾಹನವನ್ನು ತಯಾರಿಸುವುದನ್ನು ಬಿಡಬೇಕುʼʼ ಎಂದೊಬ್ಬರು ಟ್ವೀಟ್ ಮಾಡಿ ಆರೋಪಿಸಿದ್ದಾರೆ.
ಓಲಾ ಹಾಗೂ ಕೆಲ ಕಂಪನಿಗಳ ಸ್ಕೂಟರ್‌ಗಳು ಬೆಂಕಿ ಆಕಸ್ಮಿಕಕ್ಕೆ ಒಳಗಾಗಿರುವ ಪ್ರಕರಣಗಳು ಇತ್ತೀಚೆಗೆ ಆತಂಕ ಸೃಷ್ಟಿಸಿವೆ. ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿವೆ.