ಬೆಂಗಳೂರು: ಓಲಾ ಕಂಪನಿಯು (Ola) ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಭಾರಿ ಹೂಡಿಕೆಯನ್ನು ತಮಿಳುನಾಡಿನಲ್ಲಿ ಮಾಡಲು ಉದ್ದೇಶಿಸಿದೆ. ಈ ಹೂಡಿಕೆಯನ್ನು ಸೆಳೆಯುವಲ್ಲಿ (Mohandas Pai ) ಕರ್ನಾಟಕ ಸರ್ಕಾರ ವಿಫಲವಾಗಿದೆ. ಹೀಗಾಗಿ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಇನ್ಫೋಸಿಸ್‌ನ ಮಾಜಿ ನಿರ್ದೇಶಕ ಮತ್ತು ಮಣಿಪಾಲ್ ಗ್ಲೋಬಲ್ ಎಜುಕೇಷನ್‌ನ ಅಧ್ಯಕ್ಷ ಮೋಹನ್‌ದಾಸ್ ಪೈ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರಿ ಹೂಡಿಕೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಕಾಳಜಿ ಇದ್ದಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಓಲಾ ತಮಿಳುನಾಡಿನಲ್ಲಿ ವಿಶ್ವದ ಅತಿ ದೊಡ್ಡ ಇವಿ ಹಬ್ ಅನ್ನು ಸ್ಥಾಪಿಸಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೋಹನ್ ದಾಸ್ ಪೈ ಅವರು ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಏಕೆ ಇವಿ ಹೂಡಿಕೆಯನ್ನು ಕಳೆದುಕೊಂಡಿದೆ ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕವು ಭಾರತದಲ್ಲಿಯೇ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳಿಗೆ ನೀತಿಯನ್ನು ಜಾರಿಗೊಳಿಸಿದೆ. ಹೀಗಿದ್ದರೂ, ಇವಿ ಹೂಡಿಕೆಯನ್ನು ತಪ್ಪಿಸಿಕೊಂಡಿರುವುದೇಕೆ ಎಂದು ಪೈ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಶನಿವಾರ ಓಲಾ ಕಂಪನಿಯ ಸಿಇಒ ಭವೀಶ್ ಅಗ್ರವಾಲ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಭೇಟಿಯಾಗಿ, ಇವಿ ಘಟಕ ಸ್ಥಾಪನೆಗೆ ಸರ್ಕಾರ ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಓಲಾ ಕಂಪನಿಯು ನೂತನ ಘಟಕಕ್ಕಾಗಿ 7,614 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದ್ದು, ಸೆಲ್ ಉತ್ಪಾದನೆ ಮತ್ತು ಕಾರುಗಳ ತಯಾರಿಕೆಯನ್ನು ನಡೆಸಲಿದೆ. ಹೂಡಿಕೆಯಿಂದ 3,111 ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.