Site icon Vistara News

ರದ್ದಿ ಪೇಪರ್‌ಗೆ ಬಂದಿದ್ದೇಕೆ ಚಿನ್ನದ ಬೆಲೆ?

ನಿಮ್ಮನೆಯಲ್ಲಿ ರದ್ದಿ ಪೇಪರ್‌ ಇದ್ದರೆ ಒಂದ್ಸಲ ಮಾರಿ ನೋಡಿ. ಒಳ್ಳೆ ಬೆಲೆ ಸಿಗಬಹುದು. ಮುಂಬಯಿಯ ಕೆಲವೆಡೆ ಒಂದು ಕಿಲೋ ರದ್ದಿ ಪೇಪರ್‌ನ ಬೆಲೆ 30 ರೂಪಾಯಿಯನ್ನೂ ಮುಟ್ಟಿದೆ. ಕೆಲವೇ ತಿಂಗಳ ಹಿಂದೆ ರದ್ದಿ ಪೇಪರ್‌ನ ಬೆಲೆ ಕಿಲೋಗೆ 12- 13 ರೂಪಾಯಿಗಳಿದ್ದವು.

ಇದಕ್ಕೆ ಕಾರಣವೇನಿರಬಹುದು?
ಕಳೆದ ಎರಡು ವರ್ಷಗಳಲ್ಲಿ ಮುದ್ರಣ ಮಾಧ್ಯಮ ಕ್ಷೇತ್ರ ತುಂಬಾ ಏರಿಳಿತ ಕಂಡಿದೆ. ಕೊರೊನಾ ವೇಳೆಯಲ್ಲಿ ಮನೆಮನೆಗೆ ಪತ್ರಿಕೆ ತಲುಪಿಸಲು ಸಾಧ್ಯವಾಗದೆ ಹಲವಾರು ಪತ್ರಿಕೆಗಳು ಮುದ್ರಣ ನಿಲ್ಲಿಸಿದವು. ಕೆಲವು ಪತ್ರಿಕೆಗಳ ಪ್ರಸರಣ ಇಳಿದು, ಕೊರೊನಾ ಕಾಲದ ನಂತರ ಮತ್ತೆ ಏರಿಕೆ ಕಾಣಲಿಲ್ಲ. ಇದರ ನಡುವೆ ಸರಕಾರ ನ್ಯೂಸ್‌ಪ್ರಿಂಟ್‌ ಬೆಲೆಯನ್ನು ಎರಡು ಪಟ್ಟು ಏರಿಸಿತು. ಪತ್ರಿಕೆಗಳಿಗೂ ನ್ಯೂಸ್‌ಪ್ರಿಂಟ್‌ ಅಲಭ್ಯವಾಗತೊಡಗಿತು. ಸಣ್ಣ ಪತ್ರಿಕೆಗಳು ಎರಡು- ಮೂರನೇ ದರ್ಜೆಯ ನ್ಯೂಸ್‌ಪ್ರಿಂಟ್‌ ಅನ್ನು ಅವಲಂಬಿಸಬೇಕಾಯಿತು.

ಆದರೆ ಎರಡನೇ ದರ್ಜೆಯ ನ್ಯೂಸ್‌ಪ್ರಿಂಟ್‌ಗಳು ತಯಾರಾಗಬೇಕಾದರೂ ಹೇಗೆ? ಅದಕ್ಕೆ ರದ್ದಿ ಪೇಪರ್‌ಗಳು ಬೇಕು. ಭಾರತದಲ್ಲಿ ನ್ಯೂಸ್‌ಪ್ರಿಂಟ್‌ ಫ್ಯಾಕ್ಟರಿಗಳು ಹಳೆಯ ಪತ್ರಿಕೆಗಳನ್ನು ರಿಸೈಕಲ್‌ ಮಾಡಿ ಹೊಸ ನ್ಯೂಸ್‌ಪ್ರಿಂಟ್‌ಗಳನ್ನು ತಯಾರಿಸುತ್ತವೆ. ಆದರೆ ಸರಿಯಾದ ಸಂಗ್ರಹ ಮತ್ತು ರಿಸೈಕ್ಲಿಂಗ್‌ ವ್ಯವಸ್ಥೆ ಇಲ್ಲದ ಕಾರಣ ನಾವು ಇಂದಿಗೂ ಆಮದು ಕಾಗದವನ್ನು ಅವಲಂಬಿಸಬೇಕಾಗಿದೆ ಎಂದು ಭಾರತೀಯ ಮುದ್ರಣ ಕಾಗದ ತಯಾರಕರ ಸಂಸ್ಥೆಯ ಮಹಾಕಾರ್ಯದರ್ಶಿ ವಿಜಯ್‌ಕುಮಾರ್‌ ಹೇಳುತ್ತಾರೆ.

ಸರಕಾರ ಮುದ್ರಣ ಕಾಗದದ ರಿಸೈಕ್ಲಿಂಗ್‌ ಅನ್ನು ಪ್ರೋತ್ಸಾಹಿಸುತ್ತದೆ. 70%ನಷ್ಟು ದೇಶೀ ಮುದ್ರಣ ಕಾಗದ ಇಂಡಸ್ಟ್ರಿ ರಿಸೈಕಲ್‌ ಆದ ಕಾಗದವನ್ನು ಅವಲಂಬಿಸಿದೆ. ಸರಿಯಾದ ಸಂಗ್ರಹ ವ್ಯವಸ್ಥೆ ಇದ್ದರೆ ಅದು 90%ಕ್ಕೂ ಏರಬಹುದಾಗಿದೆ.

ಇದಲ್ಲದೆ ನ್ಯೂಸ್‌ಪ್ರಿಂಟ್‌ ಆಮದಿಗೆ ಈಗ ದೊಡ್ಡ ತೊಡಕು ಆಗಿರುವುದು ಉಕ್ರೇನ್-‌ ರಷ್ಯಾ ಯುದ್ಧ. ಭಾರತಕ್ಕೆ ಆಮದಾಗುವ ಮುದ್ರಣ ಕಾಗದದಲ್ಲಿ ಶೇ.45ರಷ್ಟು ರಷ್ಯಾದಿಂದ ಬರುತ್ತದೆ. ಯುದ್ಧ ಆರಂಭವಾದ ಬಳಿಕ ಅಂತಾರಾಷ್ಟ್ರೀಯ ಕಂಟೈನರ್‌ಗಳು ರಷ್ಯಾದಿಂದ ಹೊರಡುವುದನ್ನು ನಿಲ್ಲಿಸಿವೆ. ಹೀಗಾಗಿ ನ್ಯೂಸ್‌ಪ್ರಿಂಕ್‌ ಕೊರತೆ ತಲೆದೋರಿದೆ.

ಇದಲ್ಲದೆ ಕೆನಡಾದಲ್ಲಿ ಟ್ರಕ್ಕರ್‌ಗಳು ಮುಷ್ಕರ ಮಾಡುತ್ತಿರುವುದರಿಂದ, ನ್ಯೂಸ್‌ಪ್ರಿಂಟ್‌ ಸಾಗಿಸಲು ಸಾಧ್ಯವಾಗುತ್ತಿಲ್ಲ. ಕೆನಡಾಗೂ ನಮಗೂ ಏನು ಸಂಬಂಧ ಅಂದುಕೊಂಡಿರಾ? ನಮ್ಮಲ್ಲಿಗೆ ಬರುವ ನ್ಯೂಸ್‌ಪ್ರಿಂಟ್‌ನ ಶೇ.40 ಭಾಗ ಕೆನಡಾಗೆ ಸೇರಿದ್ದು.

ಇದೀಗ ಮಾವಿನ ಸೀಸನ್‌, ರೈತರಿಂದ ಬರುವ ಮಾವಿನಕಾಯಿಗಳನ್ನು ಮಾರಾಟಗಾರರು ಪ್ಲಾಸ್ಟಿಕ್‌ ಕಂಟೈನರ್‌ಗಳಲ್ಲಿ ಪೇಪರ್‌ ತುಂಬಿಸಿ ಇಡುತ್ತಾರೆ. ಇದಕ್ಕೂ ಪೇಪರ್‌ ದೊಡ್ಡ ಪ್ರಮಾಣದಲ್ಲಿ ಬೇಕು.

ಸಾಮಾನ್ಯವಾಗಿ ಹಳೆಯ ಪೇಪರ್‌ಗಳನ್ನು ರದ್ದಿ ಸಂಗ್ರಾಹಕರು ಸಂಗ್ರಹಿಸುತ್ತಾರೆ. ಇವರಿಂದ ಹೋಲ್‌ಸೇಲ್‌ ನ್ಯೂಸ್‌ಪೇರ್‌ ಡೀಲರ್‌ಗಳು ಖರೀದಿಸುತ್ತಾರೆ. ಇವರು ಅದನ್ನು ನ್ಯೂಸ್‌ಪ್ರಿಂಟ್‌ ಮಿಲ್‌ಗಳಿಗೆ ಮಾರುತ್ತಾರೆ. ಇಲ್ಲಿ ಡಿ- ಲಿಂಕಿಂಗ್‌ ಅಂಥವಾ ಪೇಪರ್‌ನಲ್ಲಿರುವ ಇಂಕ್‌ ಅನ್ನು ತೆಗೆದು ಪಲ್ಪ್‌ ಮಾಡಿ, ಅದನ್ನು ಪೇಪರ್‌ ಆಗಿ ಪರಿವರ್ತಿಸಿ ಮಾರಲಾಗುತ್ತದೆ. ಇದನ್ನು ಮತ್ತೆ ಪತ್ರಿಕೆ ಮುದ್ರಿಸಲು ಬಳಸಲಾಗುತ್ತಿದೆ.

ಆದರೆ ರದ್ದಿ ಪೇಪರ್‌ಗಳಿಗೆ ಬಂದ ಈ ಬೆಲೆ ಇದೇನೂ ಬಹಳ ದಿನ ಉಳಿಯಲಾರದು. ಮತ್ತೆ ಪತ್ರಿಕೆಗಳ ಪ್ರಸಾರ ಏರುತ್ತಿದ್ದು, ಕೊರೊನಾ ಪೂರ್ವದ ದಿನಗಳತ್ತ ಮರಳುತ್ತಿದೆ. ಹೀಗಾಗಿ ರದ್ದಿ ಪತ್ರಿಕೆಯೂ ಧಾರಾಳವಾಗಿ ಲಭ್ಯವಾಗಲಿದೆ. ಆಗ ಅದರ ಬೆಲೆಯೂ ಇಳಿಯಲಿದೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ‌ʻಗ್ಯಾಸ್ʼ ಟ್ರಬಲ್: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ₹ 250 ಏರಿಕೆ

Exit mobile version