Site icon Vistara News

GOOD NEWS| ಆಗಸ್ಟ್‌ 15ರಂದು ಔಷಧಗಳ ದರ ಇಳಿಕೆಗೆ ಕೇಂದ್ರ ಸರ್ಕಾರ ಪರಿಶೀಲನೆ

medicine

ನವ ದೆಹಲಿ: ಕೇಂದ್ರ ಸರ್ಕಾರ ಆಗಸ್ಟ್‌ ೧೫ರಂದು ಕೆಲವು ನಿರ್ಣಾಯಕ ಔಷಧಗಳ ದರ ಇಳಿಕೆಗೆ ಮುಂದಾಗಿದೆ. ಕ್ಯಾನ್ಸರ್‌ ಮತ್ತು ಹೃದಯದ ಕಾಯಿಲೆ ಕುರಿತ ಚಿಕಿತ್ಸೆಯಲ್ಲಿ ಬಳಸುವ ಪ್ರಮುಖ ಔಷಧಗಳ ದರಗಳು ಇಳಿಕೆಯಾಗುವ ನಿರೀಕ್ಷೆ ಇದೆ.

ಔಷಧಗಳ ದರ ಇಳಿಸುವ ಬಗ್ಗೆ ಪ್ರಸ್ತಾಪ ಇದ್ದು, ಸರ್ಕಾರ ಅಂತಿಮ ನಿರ್ಧಾರವನ್ನು ಶೀಘ್ರ ಕೈಗೊಳ್ಳಲಿದೆ. ನಿರ್ಣಾಯಕ ಔಷಧಗಳ ದುಬಾರಿ ದರಗಳ ಬಗ್ಗೆ ಸರ್ಕಾರ ಕಳವಳ ಹೊಂದಿದೆ. ಹೀಗಾಗಿ ಅದನ್ನು ನಿಯಂತ್ರಿಸಲು ಮುಂದಾಗಿದೆ.

೭೦% ಇಳಿಕೆ ಸಂಭವ: ವ್ಯಾಪಕವಾಗಿ ಬಳಕೆಯಲ್ಲಿರುವ ಕೆಲವು ನಿರ್ಣಾಯಕ ಔಷಧಗಳ ದರದಲ್ಲಿ ೭೦% ಇಳಿಕೆಯಾಗುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರವು ನಿರ್ಣಾಯಕ ಔಷಧಗಳ ಪಟ್ಟಿಯನ್ನು ( NLEM) ಪರಿಷ್ಕರಿಸುವ ಸಾಧ್ಯತೆ ಇದೆ.

ದರ ನಿಯಂತ್ರಣಕ್ಕೆ ಚಿಂತನೆ: ಮಾರಾಟದಲ್ಲಿ ಲಾಭಾಂಶ ಅಧಿಕವಾಗಿರುವ ಔಷಧಗಳ ದರಗಳಿಗೆ ಮಿತಿಯನ್ನು ವಿಧಿಸಲು ಕೂಡ ಚಿಂತನೆ ನಡೆದಿದೆ. ಈ ಸಂಬಂಧ ಆರೋಗ್ಯ ಸಚಿವ ಮಾನ್‌ಸುಖ್‌ ಮಾಂಡವೀಯ ಅವರು ಔಷಧ ಉತ್ಪಾದನೆ ಮತ್ತು ಮಾರಾಟ ವಲಯದ ಪ್ರಮುಖರೊಡನೆ ಇತ್ತೀಚೆಗೆ ಸಮಾಲೋಚನೆಯನ್ನೂ ನಡೆಸಿದ್ದಾರೆ. ಕೆಲವು ಔಷಧಗಳಲ್ಲಿ ವ್ಯಾಪಾರದ ಲಾಭಾಂಶ ೧೦೦೦%ಗೂ ಹೆಚ್ಚು ಇರುವುದು ಗೊತ್ತಾಗಿದೆ. ಪ್ರಸ್ತುತ ಔಷಧ ದರ ನಿಯಂತ್ರಕ ಎನ್‌ಪಿಪಿಎ ೩೫೫ ಔಷಧಗಳ ದರಗಳಿಗೆ ಮಿತಿ ವಿಧಿಸಿದೆ. ದರ ನಿಯಂತ್ರಣಕ್ಕೆ ಒಳಪಟ್ಟಿರುವ ಔಷಧಗಳ ಮಾರಾಟದಲ್ಲಿ ಚಿಲ್ಲರೆ ಮಾರಾಟಕ್ಕೆ ಲಾಭಾಂಶ ೮% ಮತ್ತು ಸಗಟು ಮಾರಾಟಕ್ಕೆ ಲಾಭಾಂಶ ೧೬% ಮಿತಿಯೊಳಗೆ ಇರಬೇಕಾಗುತ್ತದೆ.

೨೦೧೯ರ ಫೆಬ್ರವರಿಯಲ್ಲಿ ಎನ್‌ಪಿಪಿಎ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ೪೧ ಔಷಧಗಳ ಮಾರಾಟ ದರದ ಮೇಲೆ ಮಿತಿಯನ್ನು ವಿಧಿಸಿತ್ತು. ಇದರಿಂದಾಗಿ ಅವುಗಳ ದರ ಇಳಿದಿತ್ತು. ೨೦೨೧ರ ಆಗಸ್ಟ್‌ನಲ್ಲಿ ಆರೋಗ್ಯ ಸಚಿವರು ಸಂಸತ್ತಿನಲ್ಲಿ ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳ ದರಗಳಿಗೆ ಮಿತಿ ವಿಧಿಸಿರುವುದರಿಂದ ಗ್ರಾಹಕರಿಗೆ ಒಟ್ಟಾರೆಯಾಗಿ ವಾರ್ಷಿಕ ೧೨,೦೦೦ ಕೋಟಿ ರೂ. ಉಳಿತಾಯವಾದಂತಾಗಿದೆ ಎಂದು ತಿಳಿಸಿದ್ದರು.

Exit mobile version