ಹೂವಪ್ಪ, ಬೆಂಗಳೂರು
ಬೆಂಗಳೂರು: ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಇಳಿಕೆಯಾಗಿದೆ. ಗ್ರಾಹಕರಿಗೆ ಇದರಿಂದ ಸದ್ಯಕ್ಕೆ ಅನುಕೂಲವಾಗಿದೆ. ಆದರೆ ಬೆಳೆಗಾರರಿಗೆ ನಷ್ಟವಾಗಿದೆ. ಈರುಳ್ಳಿಯ ದಾಸ್ತಾನು ಹೆಚ್ಚಳ, ರಫ್ತ ಇಳಿಕೆ, ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆಯ ಮಂದಗತಿಯ ಪರಿಣಾಮ ಈರುಳ್ಳಿ ದರ ಇಳಿಕೆಯಾಗಿದೆ (Market news) ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಈ ನಡುವೆ ಕೆಲ ರಾಜ್ಯಗಳ ರೈತರು, ಪಾಕಿಸ್ತಾನಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ ರಫ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದರಿಂದ ಬೆಲೆ ಕುಸಿತದ ನಷ್ಟವನ್ನು ಭರಿಸಿಕೊಳ್ಳಬಹುದು ಎಂದು ಒತ್ತಾಯಿಸಿದ್ದಾರೆ.
ಕಳೆದೆರಡು ತಿಂಗಳ ಹಿಂದೆ ಸುರಿದ ಮಳೆಯ ಕಾರಣದಿಂದ ರಾಜ್ಯದಲ್ಲಿ ಈರುಳ್ಳಿ ಶೇ. 90 ರಷ್ಟು ಡ್ಯಾಮೇಜ್ ಆಗಿತ್ತು. ಗುಣಮಟ್ಟ ನಷ್ಟವಾಗಿತ್ತು. ಶೇ. 10 ರಷ್ಟು ಮಾತ್ರ ಉತ್ತಮ ಗುಣಮಟ್ಟವನ್ನು ಹೊಂದಿದೆ.
ಎಪಿಎಂಸಿ ಮಾರುಕಟ್ಟೆಗೆ ದಿನಪ್ರತಿ 35-45 ಸಾವಿರ ಟನ್ ಈರುಳ್ಳಿ ಪೂರೈಕೆಯಾಗುತ್ತಿದ್ದು, ( ಉತ್ತಮ ದಪ್ಪ ಹೊಸದು) ಈರುಳ್ಳಿ 50 ಕೆಜಿಗೆ 750-850 ರೂ.ಗೆ ಮಾರಟವಾಗುತ್ತಿದೆ. ಮಧ್ಯಮ ಗುಣಮಟ್ಟದ ಈರುಳ್ಳಿ 400-500 ರೂ.ಗೆ ಮಾರಾಟವಾಗುತ್ತಿದೆ. ಸಣ್ಣ ಈರುಳ್ಳಿ 100-200 ರೂ.ಗೆ ಮಾರಾಟವಾಗುತ್ತಿದೆ. ಚಿಲ್ಲರೆ ದರದಲ್ಲಿ ಉತ್ತಮ ಗುಣಮಟ್ಟದ ಹೊಸ ಈರುಳ್ಳಿ ಕೆ.ಜಿಗೆ 20 -25 ರೂ.ಗೆ ಮಾರಟವಾಗುತ್ತಿದೆ. ಮಧ್ಯಮ ದರ್ಜೆಯದ್ದಕ್ಕೆ 15-16 ರೂ. ಇದೆ. ಸಣ್ಣ ಈರುಳ್ಳಿಗೆ ಬೇಡಿಕೆಯೇ ಇಲ್ಲವಾಗಿದೆ. ಈರುಳ್ಳಿಯ ಉತ್ಪಾದನಾ ವೆಚ್ಚ ಹೆಚ್ಚಳದಿಂದಾಗಿ ಈರುಳ್ಳಿ ಬೆಳೆಗಾರಿಗೆ ನಷ್ಟವಾಗುತ್ತಿದೆ. ರೈತರ ಪಾಲಿಗೆ ಬೆಳೆಯೂ ಇಲ್ಲ ಬೆಲೆಯೂ ಇಲ್ಲದೆ ಪರದಾಡುವಂತಾಗಿದೆ.
ಅತಿವೃಷ್ಟಿಯಿಂದ ಬೆಳೆ ಹಾನಿ: ಸತತವಾಗಿ ಸುರಿದ ಮಳೆಗೆ ಈರುಳ್ಳಿ ಕಟಾವು ಮಾಡಲು ರೈತರಿಗೆ ಸಮಯ ಸಿಕ್ಕಿಲ್ಲ. ಹೀಗಾಗಿ ಕೊಳೆತು ಹೋಗಿದೆ ಹೀಗಾಗಿ ಸಾವಿರಾರು ಚೀಲ ಈರುಳ್ಳಿ ನಾಶವಾಗಿದೆ. ಮೆಕ್ಕೆಜೋಳ, ಕಡಲೆಕಾಯಿ, ಸೋಯಾ, ಸೂರ್ಯಕಾಂತಿ ಹೀಗೆ ಎಲ್ಲಾ ಬೆಳೆಗಳು ಈ ವರ್ಷ ಅತಿವೃಷ್ಟಿ ಮಳೆಯಿಂದಾಗಿ ಬೆಳೆಗಳು ಸಂಪೂರ್ಣ ನಾಶವಾಗಿದೆ ಎನ್ನುತ್ತಾರೆ ಚಳ್ಳಿಕೆರೆ ತಾಲೂಕು ಕೊಂಡಹಳ್ಳಿ ಗ್ರಾಮದ ರೈತ ಹನುಮಂತಪ್ಪ.
ಈರುಳ್ಳಿ ಬೆಳೆಗೆ ಖರ್ಚು ಅಧಿಕ: ಚಿತ್ರದುರ್ಗ, ಗದಗ, ವಿಜಾಪುರ, ಗುಲಬರ್ಗಾ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯುತ್ತಿದ್ದು, ಪ್ರಸ್ತುತ ಬೆಳೆ ಚಿತ್ರದುರ್ಗ, ಚಳ್ಳಕೆರೆ ಭಾಗಗಳಲ್ಲಿ ಕಟಾವಿಗೆ ಬಂದಿದೆ.
ಕಳೆದೆರಡು ವರ್ಷ ಗಳಿಂದ ಈರುಳ್ಳಿಗೆ ಬೆಲೆ ಸಿಗದ ಕಾರಣ ಈ ವರ್ಷ ಈರುಳ್ಳಿ ಬಿತ್ತನೆಗೆ ಅರ್ಧದಷ್ಟು ರೈತರು ಹಿಂದೇಟು ಹಾಕಿದ್ದಾರೆ. ಹೀಗಾಗಿ ಶೇ. 50 ರಷ್ಟು ಮಾತ್ರ ಬಿತ್ತನೆಯಾಗಿದೆ. ಆಗಸ್ಟ್ ಸೆಪ್ಟೆಂಬರ್‌ನಲ್ಲಿ ಕನಿಷ್ಠ 500-600 ಲಾರಿಯಷ್ಟು ಈರುಳ್ಳಿ ಬೆಂಗಳೂರು ಮಾರುಕಟ್ಟೆ ಒಂದಕ್ಕೆ ಬರಬೇಕಾಗಿತ್ತು ಆದ್ರೆ 80-100 ಲಾರಿ ಬಂದರೆ ಹೆಚ್ಚು. ಈ ವರ್ಷ ಮಾರುಕಟ್ಟೆಗೆ ಈರುಳ್ಳಿ ಕಡಿಮೆ ಬರುತ್ತಿದೆ. ಹಾಗಂತ ಬೆಲೆ ಏರಿಕೆ ಆಗಿಲ್ಲ. ಮಹಾರಾಷ್ಟ್ರದಿಂದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ರಫ್ತು ಕಡಿಮೆಯಾಗಿದೆ. ಇದು ಬೆಲೆ ಕುಸಿಯಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಎಪಿಎಂಸಿ ಸಗಟು ವ್ಯಾಪಾರಿ ದಾನಪ್ಪ ಬಿರಾದಾರ್.
ಬೆಳ್ಳುಳ್ಳಿ ಬೆಲೆ ಇಳಿಕೆ:
ಬೆಳ್ಳುಳ್ಳಿ ಬೆಳೆಗಾರಿಗೂ ಬೆಲೆ ಕುಸಿತ ಕಾಡುತ್ತಿದೆ. ಕಳೆದೆರಡು ವರ್ಷಗಳ ಹಿಂದೆ ಉತ್ತಮ ಬೆಲೆ ಇದ್ದ ಕಾರಣ ರೈತರು ಬೆಳೆ ಬೆಳೆದಿದ್ದರು. ಆದರೆ ರಫ್ತು ಬೇಡಿಕೆ ಇಲ್ಲದೆ ಬೆಲೆ ಪಾತಾಳ ಕಂಡಿದೆ. ಸಾವಿರಾರು ಎಕರೆಯಲ್ಲಿ ಬೆಳೆದಿರುವ ಬೆಳ್ಳುಳ್ಳಿಗೆ ಬೆಲೆ ಸಿಗದೆ ಪರಿತಪಿಸುತ್ತಿದ್ದಾರೆ. ಕಳೆದ ವರ್ಷ ಬೆಳ್ಳುಳ್ಳಿಗೆ ಕೆ.ಜಿಗೆ 100-150 ರೂ. ದರ ಇತ್ತು. ಈಗ 40-45 ರೂ.ಗೆ ಇಳಿದಿದೆ.