ಮುಂಬಯಿ: ಕೋವಿಡ್-19 ಚಿಕಿತ್ಸೆಯಲ್ಲಿ ಬಳಸುವ ವಿಶ್ವದ ಮೊಟ್ಟ ಮೊದಲ ಆ್ಯಂಟಿ ವೈರಲ್ ಮಾತ್ರೆಗೆ ಅಮೆರಿಕದ ಯುಎಸ್‌ಎಫ್‌ಡಿಎ (USFDA) ಅನುಮತಿ ನೀಡಿದೆ. ಪಾಕ್ಸೊಲ್‌ವಿಡ್ (Paxlovid) ಎಂಬುದು ಈ ಮಾತ್ರೆಯ ಹೆಸರಾಗಿದೆ. ಆರಂಭಿಕ ಹಂತದಲ್ಲಿ (Mild to moderate) ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ವಯಸ್ಕರು ವೈದ್ಯರ ಸಲಹೆಯ ಮೇರೆಗೆ ಈ ಮಾತ್ರೆಯನ್ನು ತೆಗೆದುಕೊಳ್ಳಬಹುದು. ಕೋವಿಡ್-19 ಸೋಂಕು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿಯಲ್ಲಿ ಇರುವವರು, ಸಾವಿಗೀಡಾಗುವ ಅಪಾಯ ಎದುರಿಸುತ್ತಿರುವವರು ಕೂಡ ಈ ಮಾತ್ರೆಯನ್ನು ವೈದ್ಯರ ಸೂಚನೆ ಮೇರೆಗೆ ಪಡೆಯಬಹುದು.
ಉತ್ಪಾದಕ ಯಾರು?
ಅಮೆರಿಕದ ಔಷಧ ಉತ್ಪಾದಕ ಫೈಜರ್ (Pfizer) ಈ ಔಷಧವನ್ನು ತಯಾರಿಸುತ್ತಿದೆ. ಈ ಮಾತ್ರೆಯನ್ನು ಇದುವರೆಗೆ ಅಮೆರಿಕ ಮತ್ತು ಯುರೋಪಿನಲ್ಲಿ ತುರ್ತು ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತಿತ್ತು. ಕೋವಿಡ್ ಪ್ಯಾಂಡಮಿಕ್ ಈಗ ಎಂಡೆಮಿಕ್ ಹಂತದಲ್ಲಿ ಇದ್ದು, ಗುಳಿಗೆಗಳು ಕೋವಿಡ್‌ನ ಸಾಮಾನ್ಯ ಲಕ್ಷಣಗಳಿದ್ದಾಗ ಉಪಶಮನದ ದೃಷ್ಟಿಯಿಂದ ಗೇಮ್ ಚೇಂಜರ್ ಆಗಬಹುದು ಎಂದು ತಜ್ಞರು ಹೇಳಿದ್ದಾರೆ.
ಸಿಪ್ಲಾ, ಡಾ ರೆಡ್ಡೀಸ್, ಟೊರೆಂಟ್, ಹೆಟೆರೊ ಬಯೊಕಾನ್, ಎಮ್‌ಕ್ಯೂರ್, ಗ್ರಾನುಲ್ಸ್ ಇಂಡಿಯಾ, ಗ್ಲೆನ್‌ಮಾರ್ಕ್ ಮತ್ತು ಸನ್ ಫಾರ್ಮಾ ಕಳೆದ ವರ್ಷ ಈ ಕಡಿಮೆ ಬೆಲೆಯ ಗುಳಿಗೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿವೆ. ಜೆನೆರಿಕ್ ಆವೃತ್ತಿಯಲ್ಲಿ ಈ ಮಾತ್ರೆ ಅಗ್ಗದ ಬೆಲೆಗೆ ಮಾರಾಟವಾಗಲಿದೆ.
ಭಾರತದಲ್ಲಿ ಹೈದರಾಬಾದ್ ಮೂಲದ ಹೆಟೆರೊ (Hetero) ಔಷಧ ಕಂಪನಿಯು Paxlovid ಮಾತ್ರೆಯ ಜೆನೆರಿಕ್ ಆವೃತ್ತಿಯಾದ NIRMACOM ಮಾತ್ರೆಯನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.
ಇದನ್ನೂ ಓದಿ: Covid Variant Arcturus: ಕೋವಿಡ್ ಹೊಸ ತಳಿ ಆರ್ಕ್ಟರಸ್‌ಗೆ ಥಾಯ್ಲೆಂಡ್‌ನಲ್ಲಿ ಮೊದಲ ಸಾವು, ಜಗತ್ತಿನಾದ್ಯಂತ ಆತಂಕ!