ನವ ದೆಹಲಿ: ಶಾರದಾ ಗ್ರೂಪ್ ಅಕ್ರಮ ಹಣ ವರ್ಗಾವಣೆ ಹಗರಣಕ್ಕೆ (Saradha scam case) ಸಂಬಂಧಿಸಿ ಜಾರಿ ನಿರ್ದೇಶನಾಲಯವು (ED), ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ (Nalini Chidambaram) ಅವರ 6 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿಯಲ್ಲಿ (PMLA) ಕ್ರಮ ಕೈಗೊಳ್ಳಲಾಗಿದೆ. ಈ ಆಸ್ತಿಗಳು ಹಣಕಾಸು ವಂಚನೆ ನಡೆಸಿರುವ ಶಾರದಾ ಗ್ರೂಪ್‌ಗೆ ಸೇರಿದ್ದು, ಹಗರಣದ ಫಲಾನುಭವಿಗಳಲ್ಲಿ ನಳಿನಿ ಚಿದಂಬರಂ ಕೂಡ ಇದ್ದಾರೆ ಎಂದು ಇ.ಡಿ ತಿಳಿಸಿದೆ.
ಈ ಹಗರಣ ಹಣಕಾಸು ಹಗರಣ ಆರ್ಥಿಕ, ರಾಜಕೀಯ ಬಿಕ್ಕಟ್ಟಿಗೆ ಕುಖ್ಯಾತಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಶಾರದಾ ಗ್ರೂಪ್ ನಡೆಸುತ್ತಿದ್ದ ಚಿಟ್ ಫಂಡ್‌ನಲ್ಲಿ 17 ಲಕ್ಷ ಠೇವಣಿದಾರರಿಂದ ಸಾವಿರಾರು ಕೋಟಿ ರೂ. ಸಂಗ್ರಹಿಸಿ ವಂಚಿಸಲಾಗಿತ್ತು. 2013ರಲ್ಲಿ ಗ್ರೂಪ್ ಪತನವಾದಾಗ 2,459 ಕೋಟಿ ರೂ. ಹಗರಣ ಇದಾಗಿತ್ತು. ಶಾರದಾ ಗ್ರೂಪ್ ಒಡಿಶಾ, ಅಸ್ಸಾಂ, ತ್ರಿಪುರಾ, ಜಾರ್ಖಂಡ್‌ನಲ್ಲೂ ವಂಚಿಸಿತ್ತು. ಈ ಹಗರಣದಲ್ಲಿ ಷಾಮೀಲಾಗಿರುವ ಆರೋಪ ಎದುರಿಸುತ್ತಿರುವ ನಳಿನಿ ಚಿದಂಬರಂ ಅವರ ಹೆಸರಲ್ಲಿದ್ದ 6 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಇದರಲ್ಲಿ ಸ್ಥಿರ ಮತ್ತು ಚರ ಆಸ್ತಿಗಳಿವೆ.