Site icon Vistara News

ದೇಶ ಕಷ್ಟದಲ್ಲಿದೆ, ಒಂದೆರಡು ಕಪ್ ಚಹಾ ಕಡಿಮೆ ಕುಡಿದು ಸಹಕರಿಸಿ ಎಂದು ಕರೆಕೊಟ್ಟ ಪಾಕ್‌ ಸಚಿವ

tea

ಇಸ್ಲಾಮಾಬಾದ್:‌ ದಿವಾಳಿಯ ಅಂಚಿಗೆ ಕುಸಿದಿರುವ ಪಾಕಿಸ್ತಾನದಲ್ಲಿ ಸಚಿವರೊಬ್ಬರು ಜನತೆಗೆ ಚಹಾ ಕುಡಿಯುವುದನ್ನು ಕಡಿಮೆ ಮಾಡಿ, ಕಷ್ಟದಲ್ಲಿರುವ ದೇಶಕ್ಕೆ ಸಹಕರಿಸಿ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಸಚಿವ ಅಹ್ಸನ್‌ ಇಕ್ಬಾಲ್‌ ಅವರು ಇಂಥಹದೊಂದು ಕರೆ ನೀಡಿದ್ದಾರೆ.

ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಭಾರಿ ಕಷ್ಟವಾಗುತ್ತಿದೆ. ಹೀಗಾಗಿ ಜನತೆ ಒಂದೆರಡು ಕಪ್‌ ಕಡಿಮೆ ಚಹಾ ಕುಡಿದು ಸಹಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಾಕಿಸ್ತಾನ ಕಳೆದ 2021-22ರಲ್ಲಿ 8,388 ಕೋಟಿ ರೂ. ಮೌಲ್ಯದ ಚಹಾವನ್ನು ಬಳಸಿತ್ತು ಎಂದು ವರದಿಯಾಗಿದೆ. 2020-21ರಲ್ಲಿ ಚಹಾ ಪುಡಿ ಆಮದು ಮಾಡಲು 7,082 ಕೋಟಿ ರೂ. ಖರ್ಚು ಮಾಡಿತ್ತು.

ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ನಿಂದ ೬೦೦ ಕೋಟಿ ಡಾಲರ್‌ ಸಾಲ ಪಡೆದು ದಿವಾಳಿಯಾಗುವುದರಿಂದ ತಪ್ಪಿಸಲು ಯತ್ನಿಸುತ್ತಿದೆ. ಆದರೆ ಸಾಲ ಬೇಕಿದ್ದರೆ ಖರ್ಚು ವೆಚ್ಚಗಳನ್ನು ನಿಯಂತ್ರಿಸಿ ಆರ್ಥಿಕತೆಯನ್ನು ಗಟ್ಟಿಗೊಳಿಸಬೇಕು ಎಂದು ಐಎಂಎಫ್‌ ಷರತ್ತು ವಿಧಿಸಿದೆ. ಹೀಗಾಗಿ ಕಠಿಣ ವಿತ್ತೀಯ ನಿಯಂತ್ರಣ ಕ್ರಮಗಳನ್ನು ಪಾಕ್‌ ಸರಕಾರ ಇತ್ತೀಚೆಗೆ ಕೈಗೊಂಡಿದೆ. ತೈಲದ ಮೇಲಿನ ಸಬ್ಸಿಡಿಯನ್ನೂ ಇತ್ತೀಚೆಗೆ ರದ್ದುಪಡಿಸಿತ್ತು. ಹೀಗಾಗಿ ಅಲ್ಲಿ ತೈಲ ದರ ಇತ್ತೀಚೆಗೆ ಏರಿತ್ತು.

ಐಎಂಎಫ್‌ ಅನ್ನು ಮನವೊಲಿಸಲು ಪಾಕಿಸ್ತಾನ ಕಳೆದ ವಾರ ೪೭೦೦ ಕೋಟಿ ಡಾಲರ್‌ ಗಾತ್ರದ ಹೊಸ ಬಜೆಟ್‌ ಅನ್ನೂ ಮಂಡಿಸಿತ್ತು.

ವಿಶ್ವದಲ್ಲಿಯೇ ಅತಿ ಹೆಚ್ಚು ಚಹಾ ಆಮದು ಮಾಡುವ ರಾಷ್ಟ್ರ ಪಾಕಿಸ್ತಾನ. ೨೨ ಕೋಟಿ ಜನಸಂಖ್ಯೆ ಇಲ್ಲಿದೆ. ಹೀಗಾಗಿ ಚಹಾ ಪುಡಿ ಆಮದಿಗೆ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಬೇಕಾಗುತ್ತಿದೆ. ಇದು ಪಾಕ್‌ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

Exit mobile version