ಇಸ್ಲಮಾಬಾದ್: ಪಾಕಿಸ್ತಾನ ಮುಂದಿನ 6 ತಿಂಗಳಿನಲ್ಲಿ ಸಾಲದ ಮರು ಪಾವತಿಗೆ ವಿಫಲವಾಗುವ ಹಾಗೂ 2024ರ ಮಾರ್ಚ್ ವೇಳೆಗೆ ದಿವಾಳಿಯಾಗುವ ನಿರೀಕ್ಷೆ ಇದೆ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ (International monetary fund) ಜೂನ್ ಅಂತ್ಯದ ತನಕ ನೆರವು ನೀಡಲಿದೆ. ಆದರೆ 2024ರ ಏಪ್ರಿಲ್‌ನಲ್ಲಿ ಪಾಕಿಸ್ತಾನ ದೊಡ್ಡ ಮೊತ್ತದ ಡಾಲರ್ ಸಾಲವನ್ನು ಮರು ಪಾವತಿಸಬೇಕಾಗುತ್ತದೆ. ಇದು ಭಾರಿ ಸವಾಲಾಗಿ ಪರಿಣಮಿಸಲಿದೆ. ಪಾಕಿಸ್ತಾನ ಈಗ 5.6 ಶತಕೋಟಿ ಡಾಲರ್ (ಅಂದಾಜು 45,360 ಕೋಟಿ ರೂ.) ವಿದೇಶಿ ವಿನಿಮಯ ಸಂಗ್ರಹವನ್ನು (Foreign exchange reserve) ಹೊಂದಿದೆ. ಇದು 6 ತಿಂಗಳಿನ ತನಕ ಸಾಲದ ನಿರ್ವಹಣೆಗೆ ಸಾಕು. ಬಳಿಕ ಸುಸ್ತಿಸಾಲಗಾರನಾಗುವ (default) ಅಪಾಯ ಇದೆ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ.
ಇನ್ನು ಆರು ತಿಂಗಳಲ್ಲಿ ಸುಸ್ತಿ ಸಾಲನಾಗಲಿರುವ ಪಾಕಿಸ್ತಾನ ವಿದೇಶಿ ಆರ್ಥಿಕ ನೆರವಿನಿಂದ 14.9 ಶತಕೋಟಿ ಡಾಲರ್ (ಅಂದಾಜು 1.20 ಲಕ್ಷ ಕೋಟಿ ರೂ.) ಸಿಗಬಹುದು. ಆದರೆ ಇದು ಕೂಡ 2024ರ ಮಾರ್ಚ್ ತನಕ ಸಾಕು. ಹೀಗಾಗಿ ಬಳಿಕ ಪಾಕಿಸ್ತಾನ ಹೇಗೆ ಸಾಲ ಮರು ಪಾವತಿಸಲಿದೆ ಎಂಬುದು ಪ್ರಶ್ನಾರ್ಹವಾಗಿದೆ ಎಂದು ವರದಿ ತಿಳಿಸಿದೆ.
ಪಾಕಿಸ್ತಾನದ ರೂಪಾಯಿ, ಡಾಲರ್ ಎದುರು ದಾಖಲೆಯ 275 ರೂ.ಗೆ ಕುಸಿದಿದೆ. ಐಎಂಎಫ್ ನಿಂದ 110 ಶತಕೋಟಿ ಡಾಲರ್ (ಅಂದಾಜು 8,910 ಕೋಟಿ ರೂ.) ಸಾಲ ಪಡೆಯುವ ಯತ್ನಕ್ಕೆ ಹಿನ್ನಡೆಯಾಗಿದೆ. ಹಣದುಬ್ಬರ 27%ಕ್ಕೆ ಏರಿಕೆಯಾಗಿದೆ.