ನವ ದೆಹಲಿ: ಭಾರತದ ವಿದೇಶಿ ವಿನಿಮಯ ಸಂಗ್ರಹ ಸಮೃದ್ಧವಾಗಿದ್ದು, ವಿದೇಶಿ ಸಾಲದ ಮೊತ್ತವೂ ಕಡಿಮೆಯಾಗಿದೆ. ಹೀಗಾಗಿ ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕೆ ಆಗಿರುವ ದುಸ್ಥಿತಿ ಭಾರತಕ್ಕೆ ಉಂಟಾಗದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಆರ್‌ಬಿಐ ಒಳ್ಳೆಯ ಕೆಲಸ ಮಾಡಿದೆ ಎಂದ ರಾಜನ್: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸುವ ಮೂಲಕ ಬಹಳ ಒಳ್ಳೆಯ ಕೆಲಸವನ್ನು ಮಾಡಿದೆ. ಜತೆಗೆ ನಮ್ಮ ವಿದೇಶಿ ಸಾಲದ ಹೊರೆಯೂ ಕಡಿಮೆ ಎಂದು ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಸಮೃದ್ಧ ವಿದೇಶಿ ವಿನಿಮಯ ಸಂಗ್ರಹ ಮತ್ತು ಕಡಿಮೆ ವಿದೇಶಿ ಸಾಲವು ಭಾರತದ ಆರ್ಥಿಕತೆಯ ಚೇತರಿಕೆಗೆ ಕಾರಣವಾಗಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ವಿದೇಶಿ ವಿನಿಮಯ ಸಂಗ್ರಹ ಕುಸಿದಿದೆ. ಜತೆಗೆ ವಿದೇಶಿ ಸಾಲದ ಹೊರೆ ಅತಿಯಾಗಿದೆ. ಹೀಗಾಗಿ ಆ ದೇಶಗಳ ಆರ್ಥಿಕತೆ ನೆಲಕಚ್ಚಿದೆ ಎಂದು ರಾಜನ್ ವಿವರಿಸಿದರು. ಶ್ರೀಲಂಕಾದ ವಿದೇಶಿ ವಿನಿಮಯ ಸಂಗ್ರಹ ಇತ್ತೀಚೆಗೆ ೫೦ ದಶಲಕ್ಷ ಡಾಲರ್‌ಗೆ (೩೯೫ ಕೋಟಿ ರೂ.) ಕುಸಿದಿತ್ತು. ವಿದೇಶಿ ಸಾಲದ ಮರುಪಾವತಿಯಲ್ಲಿ ಶ್ರೀಲಂಕಾ ಸ್ಥಗಿತಗೊಳಿಸಿದೆ. ಪಾಕಿಸ್ತಾನದಲ್ಲೂ ವಿದೇಶಿ ವಿನಿಮಯ ಸಂಗ್ರಹ ೭೫೪ ದಶಲಕ್ಷ ಡಾಲರ್‌ಗೆ ಕುಸಿದಿದೆ (ಅಂದಾಜು ೬೭,೯೪೦ ಕೋಟಿ ರೂ.)
ಆರ್‌ಬಿಐ ಅಂಕಿ ಅಂಶಗಳ ಪ್ರಕಾರ ಜುಲೈ ೨೨ರ ವೇಳೆಗೆ ೫೭೧ ಶತಕೋಟಿ ಡಾಲರ್ (ಅಂದಾಜು ೪೫ ಲಕ್ಷ ಕೋಟಿ ರೂ.) ವಿದೇಶಿ ವಿನಿಮಯ ಸಂಗ್ರಹ ಇದೆ. ಭಾರತದ ವಿದೇಶಿ ಸಾಲ ೬೨೦ ಶತಕೋಟಿ ಡಾಲರ್ ( ಅಂದಾಜು ೪೮ ಲಕ್ಷ ಕೋಟಿ ರೂ.) ಆಗಿದೆ. ಜಿಡಿಪಿ-ಸಾಲದ ಅನುಪಾತ ೧೯.೯%ಕ್ಕೆ ಇಳಿಕೆಯಾಗಿದೆ.
ಆರ್‌ಬಿಐ ತನ್ನ ರೆಪೊ ದರವನ್ನು ಏರಿಸಿರುವ ಪರಿಣಾಮ ಹಣದುಬ್ಬರ ಇಳಿಕೆಗೆ ಸಹಾಯಕವಾಗಲಿದೆ. ಆಹಾರ ಹಣದುಬ್ಬರ ಈಗಾಗಲೇ ವಿಶ್ವಾದ್ಯಂತ ತಗ್ಗುತ್ತಿದೆ. ಭಾರತದಲ್ಲೂ ಇಳಿಕೆಯಾಗಲಿದೆ ಎಂದರು.