ಇಸ್ಲಮಾಬಾದ್: ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಹಾಗೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) ಹೊಸ ಸಾಲ ಪಡೆಯುವ ಸಲುವಾಗಿ ಪಾಕಿಸ್ತಾನ ಹರಸಾಹಸ ಪಡುತ್ತಿದೆ. ಇದೀಗ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ಮತ್ತು ಸರಕಾರಿ ಅಧಿಕಾರಿಗಳು ಹೊಸ ಕಾರು ಖರೀದಿಸುವುದನ್ನು ನಿಷೇಧಿಸಿದೆ.
22 ಕೋಟಿ ಜನಸಂಖ್ಯೆ ಇರುವ ಪಾಕಿಸ್ತಾನದಲ್ಲಿ ಈಗ ಕೇವಲ 45 ದಿನಗಳಿಗೆ ಮಾತ್ರ ಸಾಕಾಗುವಷ್ಟು ವಿದೇಶಿ ವಿನಿಮಯ ಸಂಗ್ರಹ ಇದೆ. ಅದು 10 ಶತಕೋಟಿ ಡಾಲರಿಗಿಂತ ಕೆಳಕ್ಕಿಳಿದಿದೆ. (77,000 ಕೋಟಿ ರೂ.)
ಪಾಕಿಸ್ತಾನದ ಹಣಕಾಸು ಸಚಿವ ಇಸ್ಮಾಯಿಲ್, ಜುಲೈನಿಂದ ಆರಂಭವಾಗುವ 2022/23ರ ಸಾಲಿನ ಬಜೆಟ್ ಅನಾವರಣಗೊಳಿಸಿದ್ದಾರೆ. ಬಜೆಟ್‌ನಲ್ಲಿ ಶ್ರೀಮಂತರಿಗೆ ತೆರಿಗೆ, ಕಾರುಗಳ ಆಮದು ನಿಷೇಧ, ಸರಕಾರಿ ಅಧಿಕಾರಿಗಳಿಗೆ ಹೊಸ ಕಾರು ಖರೀದಿ ಬ್ಯಾನ್ ಇತ್ಯಾದಿ ಕ್ರಮಗಳನ್ನು ಘೋಷಿಸಲಾಗಿದೆ. ಸರಕಾರಿ ಅಧಿಕಾರಿಗಳು ಖಾಸಗಿ ಬಳಕೆಗೆ ಕಾರು ಕೊಳ್ಳಬಹುದೇ ಎಂಬುದು ತಕ್ಷಣ ತಿಳಿದುಬಂದಿಲ್ಲ.
” ನಾವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದೇವೆ. ಇದು ಕೊನೆಯ ಕಠಿಣ ನಿರ್ಣಯಗಳಂತೂ ಅಲ್ಲʼ ಎಂದು ಇಸ್ಮಾಯಿಲ್ ತಿಳಿಸಿದ್ದಾರೆ.
ಕಾರಣವೇನು?
ಪಾಕಿಸ್ತಾನಕ್ಕೆ ಹೊಸ ಸಾಲ ಮತ್ತು ಪರಿಹಾರದ ಪ್ಯಾಕೇಜ್ ಬೇಕಿದ್ದರೆ ಮೊದಲು ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಬೇಕು. ಇದಕ್ಕಾಗಿ ಕಠಿಣ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಐಎಂಎಫ್ ಷರತ್ತು ವಿಧಿಸಿದೆ. ಆದ್ದರಿಂದ ಹೊಸ ಸಾಲಕ್ಕೆ ಐಎಂಎಫ್ ಹೇಳಿದಂತೆ ಕೇಳಲೇಬೇಕಾದ ಪರಿಸ್ಥಿತಿ ಪಾಕ್‌ನದ್ದಾಗಿದೆ.
ತೆರಿಗೆ ಸೋರಿಕೆಯನ್ನು ತಡೆದರೆ ಪಾಕಿಸ್ತಾನ 2022-23ರಲ್ಲಿ 7 ಲಕ್ಷ ಕೋಟಿ ರೂ. ಪಾಕಿಸ್ತಾನಿ ರುಪಾಯಿಗಳನ್ನು ಉಳಿತಾಯ ಮಾಡಿ ವಿತ್ತೀಯ ಕೊರತೆಯನ್ನು ನಿಯಂತ್ರಣಕ್ಕೆ ತರಬಹುದು ಎಂದು ಇಸ್ಮಾಯಿಲ್ ವಿವರಿಸಿದ್ದಾರೆ.
ಪ್ರಸ್ತುತ ಪಾಕಿಸ್ತಾನದ ವಿತ್ತೀಯ ಕೊರತೆ ಜಿಡಿಪಿಯ 8.6%ರಷ್ಟಿದೆ. ಇದನ್ನು 4.9%ಕ್ಕೆ ಇಳಿಸಲು ಯತ್ನಿಸಲಾಗುವುದು. ಖಾಸಗೀಕರಣದ ಮೂಲಕ 96೦೦ ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆ ಇದೆ ಎಂದರು.
ಇಂಧನ ಸಬ್ಸಿಡಿಯನ್ನು ರದ್ದುಪಡಿಸಲು ಐಎಂಎಫ್ ಸೂಚಿಸಿತ್ತು. ಅದನ್ನು ಪಾಲಿಸಿದ್ದೇವೆ. ಹೀಗಾಗಿ ತೈಲ ದರ 40% ಹೆಚ್ಚಳವಾಗಿದೆ. 2022/23ರಲ್ಲಿ ಜಿಡಿಪಿ 5%ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದರು.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ಪೆಟ್ರೋಲ್ ರೇಟ್ 30 ರೂ. ಹೆಚ್ಚಳ, ಭಾರತವೇ ಗ್ರೇಟ್ ಎಂದು ಮತ್ತೊಮ್ಮೆ ಹೊಗಳಿದ ಇಮ್ರಾನ್ ಖಾನ್