ಆಧಾರ್ ಕಾರ್ಡ್ ಜತೆಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಸರ್ಕಾರ ವಿಧಿಸಿದ್ದ 2023ರ ಜೂನ್ 30ರ ಗಡುವು ಮುಕ್ತಾಯವಾಗಿದೆ. ಈ ಹಿಂದೆ ಹಲವಾರು ಸಲ ಸರ್ಕಾರ ಗಡುವನ್ನು ಮುಂದೂಡಿತ್ತು. ಆದರೆ ಈ ಸಲ ಮುಂದೂಡಲಾಗಿಲ್ಲ. ಇದರ ಪರಿಣಾಮ ಆಧಾರ್ ಜತೆಗೆ ಲಿಂಕ್ ಮಾಡದಿರುವ ಪ್ಯಾನ್ ಕಾರ್ಡ್ 2023ರ ಜುಲೈ 1ರ ಬಳಿಕ ನಿಷ್ಕ್ರಿಯವಾಗುತ್ತಿದೆ. ಒಂದು ವೇಳೆ ಈ ರೀತಿ ಪ್ಯಾನ್ ಕಾರ್ಡ್ ನಿಷ್ಕ್ರಿಯವಾದರೆ ಸಕ್ರಿಯಗೊಳಿಸಲು ಏನು ಮಾಡಬೇಕು? ನಿಷ್ಕ್ರಿಯವದರೆ ಪರಿಣಾಮವೇನು? ಇಲ್ಲಿದೆ ವಿವರ.
ಪ್ಯಾನ್ ಕಾರ್ಡ್ ನಿಷ್ಕ್ರಿಯವಾದರೆ ಕೆಲವು ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಆದಾಯ ತೆರಿಗೆ ವಿವರ ಸಲ್ಲಿಕೆ (ಐಟಿಆರ್) ಸಾಧ್ಯವಾಗುವುದಿಲ್ಲ. ಆಧಾರ್ ಜತೆಗೆ ಪ್ಯಾನ್ ಲಿಂಕ್ ಮಾಡದಿದ್ದರೆ, ಪ್ಯಾನ್ ನಿಷ್ಕ್ರಿಯವಾಗುತ್ತದೆ. ಇದರ ಪರಿಣಾಮ ಪ್ಯಾನ್ ದಾಖಲೆ ಅಗತ್ಯವಿರುವ ರಿಫಂಡ್‌ಗಳು ನೆರವೇರುವುದಿಲ್ಲ. ಟಿಡಿಎಸ್ ಮತ್ತು ಟಿಸಿಎಸ್ ಕಡಿತದ ಪ್ರಮಾಣ ಹೆಚ್ಚಲಿದೆ. ನಿಮಗೆ ಐರಿ ರಿಟರ್ನ್ ಮಾಡಲು ಕಷ್ಟವಾಗಬಹುದು. ಅದಕ್ಕೆ ಮತ್ತೆ ದಂಡ ಕಟ್ಟಬೇಕಾಗಿ ಬರಬಹುದು. ತೆರಿಗೆ ಬೆನಿಫಿಟ್ ಸಿಗದೆ ಹೋಗಬಹುದು. ಹೊಸ ಬ್ಯಾಂಕ್ ಅಕೌಂಟ್ ತೆರೆಯಲು ಕಷ್ಟವಾಗಬಹುದು. ಕಾರು, ಗೃಹಸಾಲವನ್ನು, ಕ್ರೆಡಿಟ್ ಕಾರ್ಡ್ ಅನ್ನು ಬ್ಯಾಂಕ್‌ಗಳಿಂದ ಪಡೆಯಲು ಕಷ್ಟ ಸಾಧ್ಯವಾಗಬಹುದು.
ಪ್ಯಾನ್ ಅನ್ನು ಮತ್ತೆ ಸಕ್ರಿಯಗೊಳಿಸುವುದು ಹೇಗೆ? ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಮತ್ತೆ ಸಕ್ರಿಯಗೊಳಿಸಬಹುದು. 1000 ರೂ. ದಂಡ ಪಾವತಿಸಿ ಆಧಾರ್-ಪ್ಯಾನ್ ಲಿಂಕ್ ಮಾಡಿದ ಬಳಿಕ ಪ್ಯಾನ್ ಸಕ್ರಿಯವಾಗುತ್ತದೆ. ಆದರೆ ಈ ಸಲ ಇದಕ್ಕಾಗಿ 30 ದಿನಗಳ ಕಾಲ ಕಾಯಬೇಕಾಗುತ್ತದೆ.
ಪ್ಯಾನ್ ಅನ್ನು ಆಧಾರ್ ಜತೆಗೆ ಲಿಂಕ್ ಮಾಡಲು ಚಲನ್ ರಿಸಿಪ್ಟ್ ಅನ್ನು ಡೌನ್‌ಲೋಡ್ ಮಾಡಬೇಕಾದ ಅಗತ್ಯ ಇಲ್ಲ. ಶುಲ್ಕ ಪಾವತಿಸಿಯೂ 2023ರ ಜೂನ್ 30ರಂದು ಪ್ಯಾನ್- ಆಧಾರ್ ಲಿಂಕ್ ಆಗದಿದ್ದರೆ ತೆರಿಗೆ ಇಲಾಖೆ ಅಂಥ ಕೇಸ್ ಗಳನ್ನು ಪರಿಶೀಲಿಸಲಿದೆ ಎಂದು ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ. ಹೀಗಾಗಿ 1000 ರೂ. ವಿಳಂಬ ಶುಲ್ಕ ಪಾವತಿಸಿದ್ದರೂ, ಪ್ಯಾನ್- ಆಧಾರ್ ಲಿಂಕ್ ಆಗದಿದ್ದರೆ ಆತಂಕಪಡಬೇಕಿಲ್ಲ. ಇಲಾಖೆ ಅಂಥ ಪ್ರಕರಣಗಳನ್ನು ಪರಿಶೀಲಿಸಿ ಸಹಕರಿಸಲಿದೆ. ತಾಂತ್ರಿಕ ಅಡಚಣೆ ಪರಿಣಾಮ ಕೆಲ ಪ್ಯಾನ್ ಕಾರ್ಡ್‌ದಾರರು ಶುಕ್ರವಾರ ಪರದಾಡಿದ್ದರು.
ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
ಆಧಾರ್ ಜತೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಆನ್‌ಲೈನ್ ಮೂಲಕ ಪರಿಶೀಲಿಸಬಹುದು. ಅದು ಹೀಗಿದೆ-
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ತೆರಳಿ (www.incometax.gov.in)
ಲಿಂಕ್ ಆಧಾರ್ ಸ್ಟೇಟಸ್ ಆಯ್ಕೆ ಮಾಡಿಕೊಳ್ಳಿ. ಪ್ಯಾನ್ ಮತ್ತು ಆಧಾರ್ ಸಂಖ್ಯೆ ನಮೂದಿಸಿ.
ವ್ಯೂ ಲಿಂಕ್ ಆಧಾರ್ ಸ್ಟೇಟಸ್ ಕ್ಲಿಕ್ಕಿಸಿ. (view link aadhaar status)
ಆಧಾರ್-ಪ್ಯಾನ್ ಸ್ಟೇಟಸ್ ಪೇಜ್‌ನಲ್ಲಿ ಕಾಣಿಸುತ್ತದೆ. ಉದಾಹರಣೆಗೆ ಆಧಾರ್-ಪ್ಯಾನ್ ಲಿಂಕ್ ಆಗಿದ್ದರೆ Your PAN is linked to Aadhaar number. ಎಂಬ ಸಂದೇಶ ಕಾಣಿಸುತ್ತದೆ.
ಆನ್‌ಲೈನ್ ಮೂಲಕ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಸಾಧ್ಯ ಇರುವುದರಿಂದ ದಂಡ ಪಾವತಿಸಿ ಲಿಂಕ್ ಮಾಡಿಸಿಕೊಳ್ಳುವುದು ಸೂಕ್ತ. ಪ್ಯಾನ್ ಕಾರ್ಡ್ ಹಲವು ಸಂದರ್ಭಗಳಲ್ಲಿ ಅಗತ್ಯವಾಗಿರುವುದರಿಂದ, ಆಧಾರ್-ಪ್ಯಾನ್ ಲಿಂಕ್ ಮಾಡಲು ಕಡೆಗಣಿಸದಿರುವುದು ಉತ್ತಮ.
ಪ್ಯಾನ್ – ಆಧಾರ್ ಲಿಂಕ್ ಅನ್ನು 2023ರ ಜೂನ್ 30 ರೊಳಗೆ ಮಾಡದಿದ್ದರೆ, ಬಳಿಕ 1,000 ರೂ. ದಂಡ ಕಟ್ಟಬೇಕಾಗುತ್ತದೆ. ಪ್ಯಾನ್ ನಿಷ್ಕ್ರಿಯವಾದರೆ ಯಾವುದೇ ಆದಾಯ ತೆರಿಗೆಯ ರಿಫಂಡ್ ಸಿಗುವುದಿಲ್ಲ. ಟಿಡಿಎಸ್ ಮತ್ತು ಟಿಸಿಎಸ್ ದರ ಹೆಚ್ಚುತ್ತದೆ. ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಬಹುದು. ಸಬ್ಸಿಡಿ, ಪಾಸ್ ಪೋರ್ಟ್, ಬ್ಯಾಂಕ್ ಖಾತೆ ತೆರೆಯುವಲ್ಲಿ ಅಡಚಣೆ ಆದೀತು.
ಇದನ್ನೂ ಓದಿ: Cyber Fraud: ಧೋನಿ, ಶಿಲ್ಪಾ ಶೆಟ್ಟಿ ಹೆಸರಲ್ಲಿ ಪ್ಯಾನ್ ಕಾರ್ಡ್ ಸೃಷ್ಟಿಸಿ, ಕ್ರೆಡಿಟ್ ಕಾರ್ಡ್ ಪಡೆದು ಲಕ್ಷಾಂತರ ರೂ. ವಂಚನೆ
ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೀದರೆ ಅಥವಾ ಡ್ಯಾಮೇಜ್ ಆಗಿದ್ದರೆ ಹೊಸ ಪ್ಯಾನ್ ಕಾರ್ಡಿಗೆ ಅರ್ಜಿ ಹಾಕುತ್ತೀರಿ ಅಲ್ಲವೇ. ಆಗ ಪ್ಯಾನ್ – ಆಧಾರ್ ಲಿಂಕ್ ಆಗಿರದಿದ್ದರೆ ಸವಾಲಾಗಿ ಪರಿಣಮಿಸಬಹುದು. ಏಕೆಂದರೆ ಸರ್ಕಾರ ಹೊಸ ಪ್ಯಾನ್ ಕಾರ್ಡಿಗೆ ಅರ್ಜಿ ಹಾಕುವಾಗ ಆಧಾರ್-ಪ್ಯಾನ್ ಲಿಂಕ್ ಆಗಿರಬೇಕು.