ನವ ದೆಹಲಿ: ಪ್ಯಾನ್ ಕಾರ್ಡ್ ಹಾಗೂ ಆಧಾರ್ ಲಿಂಕ್ ಮಾಡಲು 2023ರ ಮಾರ್ಚ್ 31 ಕೊನೆಯ ದಿನವಾಗಿದೆ. ಬಳಿಕ ಲಿಂಕ್ ಮಾಡದಿದ್ದರೆ 2023ರ ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಆದರೆ ಈ ಹಿಂದೆ ಹಲವಾರು ಬಾರಿ ಗಡುವನ್ನು ವಿಸ್ತರಿಸಲಾಗಿದೆ. ಆದರೆ ಈ ಸಲ ಗಡುವು ವಿಸ್ತರಣೆಯಾಗಲಿದೆಯೇ ಇಲ್ಲವೇ ( PAN-Aadhaar) ಎಂಬ ಸಂದೇಹ ಉಂಟಾಗಿದೆ.
ಈ ಹಿಂದೆ ಪ್ಯಾನ್- ಆಧಾರ್ ಲಿಂಕ್ ಮಾಡಲು 2022ರ ಮಾರ್ಚ್ 31ರ ಗಡುವು ಇತ್ತು. ಬಳಿಕ 500 ರೂ. ಶುಲ್ಕದೊಂದಿಗೆ 2022ರ ಜೂನ್ 30ಕ್ಕೆ ವಿಸ್ತರಿಸಲಾಯಿತು. ನಂತರ 2023ರ ಮಾರ್ಚ್ 31ಕ್ಕೆ 1,000 ರೂ. ದಂಡ ಸಹಿತ ವಿಸ್ತರಿಸಲಾಯಿತು. ಹೀಗಾಗಿ ಮತ್ತೊಮ್ಮೆ ವಿಸ್ತರಣೆ ಸಾಧ್ಯತೆ ಕ್ಷೀಣಿಸಿದೆ ಎಂದೂ ತೆರಿಗೆ ತಜ್ಞರು ಹೇಳುತ್ತಾರೆ.
ಟ್ಯಾಕ್ಸ್‌ಬುಡ್ಡಿ ಡಾಟ್‌ಕಾಮ್‌ನ ಸಿಇಒ ಸುಜಿತ್ ಬಂಗಾರ್ ಅವರ ಪ್ರಕಾರ, ಪ್ಯಾನ್- ಆಧಾರ್ ಲಿಂಕಿಂಗ್ ಮಹತ್ವಪೂರ್ಣ. ಈ ಸಲ ಆದಾಯ ತೆರಿಗೆ ಇಲಾಖೆ ವ್ಯಾಪಕವಾಗಿ ಜನ ಜಾಗೃತಿ ಮೂಡಿಸಿದೆ. ಹೀಗಾಗಿ ಮತ್ತೊಮ್ಮೆ ವಿಸ್ತರಣೆಯ ನಿರೀಕ್ಷೆ ಕ್ಷೀಣವಾಗಿದೆ ಎನ್ನುತ್ತಾರೆ ಅವರು.
ಪ್ಯಾನ್-ಆಧಾರ್ ಲಿಂಕ್ ಹೇಗೆ?
- ಆದಾಯ ತೆರಿಗೆ ಇಲಾಖೆಯು ಪ್ಯಾನ್ ಅನ್ನು ಆಧಾರ್ ಜತೆಗೆ ಲಿಂಕ್ ಮಾಡಲು ಹಲವು ವಿಧಾನಗಳನ್ನು ಕಲ್ಪಿಸಿದೆ.
- ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in ಮೂಲಕ ಲಿಂಕ್ ಮಾಡಬಹುದು.
- ಈ ವೆಬ್ ಸೈಟ್ನಲ್ಲಿ ರಿಜಿಸ್ಟರ್ ಆಗದಿದ್ದಲ್ಲಿ ರಿಜಿಸ್ಟರ್ ಆಗಿ. ನಿಮ್ಮ ಪ್ಯಾನ್ ನಂಬರ್ ಯೂಸರ್ ಐಡಿ ಆಗಿರುತ್ತದೆ. ಜನ್ಮ ದಿನಾಂಕ ಪಾಸ್ ವರ್ಡ್ ಆಗಿರುತ್ತದೆ.
- ಲಾಗಿನ್ ಆದ ಬಳಿಕ ಪೇಜ್‌ನಲ್ಲಿ ಲಿಂಕ್ ಯುವರ್ ಪ್ಯಾನ್ ವಿತ್ ಆಧಾರ್ ಲಭಿಸುತ್ತದೆ. ಸಿಗದಿದ್ದರೆ ಪ್ರೊಫೈಲ್ ಸೆಟ್ಟಿಂಗ್ಸ್ಗೆ ಹೋಗಿ ಲಿಂಕ್ ಆಧಾರ್ ಮೇಲೆ ಕ್ಲಿಕ್ಕಿಸಿ.
- ಪ್ಯಾನ್ ವಿವರಗಳನ್ನು ಪರಿಶೀಲಿಸಿ. ಹೊಂದಾಣಿಕೆ ಆಗದಿದ್ದರೆ ಸರಿಪಡಿಸಬೇಕಾಗುತ್ತದೆ. ಹೊಂದಾಣಿಕೆ ಆಗುವುದಿದ್ದರೆ ಲಿಂಕ್ ನೌ ಬಟನ್ ಒತ್ತಿರಿ.
- ಯಶಸ್ವಿಯಾಗಿ ಲಿಂಕ್ ಆದ ಬಳಿಕ ಮೆಸೇಜ್ ಸಿಗುತ್ತದೆ.
- NSDL/UTIIL ಕಚೇರಿಗೆ ತೆರಳಿ ಪ್ಯಾನ್- ಆಧಾರ್ ಲಿಂಕ್ ಮಾಡಬಹುದು.
- ಪ್ಯಾನ್ -ಆಧಾರ್ ಲಿಂಕ್ ಮಾಡಲು ಗಡುವು ತಪ್ಪಿದರೆ ಬಳಿಕ ಪ್ಯಾನ್ ನಿಷ್ಕ್ರಿಯ ಎನ್ನಿಸುವುದು
ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
ಆಧಾರ್ ಜತೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಆನ್‌ಲೈನ್ ಮೂಲಕ ಪರಿಶೀಲಿಸಬಹುದು. ಅದು ಹೀಗಿದೆ-
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ತೆರಳಿ ಈ ಲಿಂಕ್ ಕ್ಲಿಕ್ ಮಾಡಿ (www.incometax.gov.in)
ಲಿಂಕ್ ಆಧಾರ್ ಸ್ಟೇಟಸ್ ಆಯ್ಕೆ ಮಾಡಿಕೊಳ್ಳಿ. ಪ್ಯಾನ್ ಮತ್ತು ಆಧಾರ್ ಸಂಖ್ಯೆ ನಮೂದಿಸಿ.
ವ್ಯೂ ಲಿಂಕ್ ಆಧಾರ್ ಸ್ಟೇಟಸ್ ಕ್ಲಿಕ್ಕಿಸಿ. (view link aadhaar status)
ಆಧಾರ್-ಪ್ಯಾನ್ ಸ್ಟೇಟಸ್ ಪೇಜ್‌ನಲ್ಲಿ ಕಾಣಿಸುತ್ತದೆ. ಉದಾಹರಣೆಗೆ ಆಧಾರ್-ಪ್ಯಾನ್ ಲಿಂಕ್ ಆಗಿದ್ದರೆ Your PAN is linked to Aadhaar number. ಎಂಬ ಸಂದೇಶ ಕಾಣಿಸುತ್ತದೆ.
ವಿಸ್ತಾರನ್ಯೂಸ್ ಸಲಹೆ: ಆನ್‌ಲೈನ್ ಮೂಲಕ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಸಾಧ್ಯ ಇರುವುದರಿಂದ ದಂಡ ಪಾವತಿಸಿ ಲಿಂಕ್ ಮಾಡಿಸಿಕೊಳ್ಳುವುದು ಸೂಕ್ತ. ಪ್ಯಾನ್ ಕಾರ್ಡ್ ಹಲವು ಸಂದರ್ಭಗಳಲ್ಲಿ ಅಗತ್ಯವಾಗಿರುವುದರಿಂದ, ಆಧಾರ್-ಪ್ಯಾನ್ ಲಿಂಕ್ ಮಾಡಲು ಕಡೆಗಣಿಸದಿರುವುದು ಉತ್ತಮ.