ಇಂದೋರ್: ಆಧುನಿಕ ತಂತ್ರಜ್ಞಾನ ಬಳಸಿ ಯಾವೆಲ್ಲ ರೀತಿ ಮೋಸಗೊಳಿಸಬಹುದು ಎನ್ನುವುದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಮಧ್ಯ ಪ್ರದೇಶದ ಯುವಕನೋರ್ವನ ಪ್ಯಾನ್ ಕಾರ್ಡ್ (Pan Card) ಬಳಸಿ ಆತನ ಅರಿವಿಗೆ ಬಾರದೆ ಕೋಟ್ಯಂತರ ರೂ. ವ್ಯವಹಾರ ನಡೆಸಲಾಗಿದೆ. ಕೊನೆಗೆ ತೆರಿಗೆ ನೋಟಿಸ್ ಬಂದಾಗಲೇ ಈ ಮೋಸದ ವಿಚಾರ ಅವರ ಗಮನಕ್ಕೆ ಬಂದಿದೆ. ಸದ್ಯ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ (Pan Card Fraud).
ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಕಾಲೇಜು ವಿದ್ಯಾರ್ಥಿಯಾಗಿರುವ, 25 ವರ್ಷದ ಪ್ರಮೋದ್ ಕುಮಾರ್ ದಂಡೋಟಿಯಾ (Pramod Kumar Dandotiya) ತಮ್ಮ ಬ್ಯಾಂಕ್ ಖಾತೆಯಿಂದ 46 ಕೋಟಿ ರೂ.ಗಳ ವಹಿವಾಟು ನಡೆದಿದೆ ಎಂದು ದೂರು ಸಲ್ಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ʼʼಮುಂಬೈ ಮತ್ತು ದೆಹಲಿಯಲ್ಲಿ 2021ರಿಂದ ಕಾರ್ಯನಿರ್ವಹಿಸುತ್ತಿರುವ ಕಂಪನಿಯನ್ನು ತನ್ನ ಪ್ಯಾನ್ ಕಾರ್ಡ್ ಮೂಲಕ ನೋಂದಾಯಿಸಲಾಗಿದೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿಯಿಂದ ನೋಟಿಸ್ ಪಡೆದಾಗಲೇ ಈ ವಿಚಾರ ಅರಿವಿಗೆ ಬಂತುʼʼ ಎಂದು ಅವರು ತಿಳಿಸಿದ್ದಾರೆ.
ಪ್ರಮೋದ್ ಕುಮಾರ್ ದಂಡೋಟಿಯಾ ಹೇಳಿದ್ದೇನು?
“ನಾನು ಗ್ವಾಲಿಯರ್‌ನ ಕಾಲೇಜು ವಿದ್ಯಾರ್ಥಿ. ಆದಾಯ ತೆರಿಗೆ ಮತ್ತು ಜಿಎಸ್‌ಟಿಯಿಂದ ನೋಟಿಸ್ ಪಡೆದ ನಂತರ, ಮುಂಬೈ ಮತ್ತು ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಯು ನನ್ನ ಪ್ಯಾನ್ ಕಾರ್ಡ್ ಮೂಲಕ ನೋಂದಾಯಿಸ್ಪಟ್ಟಿದೆ ಎಂದು ನನಗೆ ತಿಳಿಯಿತು. ನನ್ನ ಪ್ಯಾನ್ ಕಾರ್ಡ್ ಅನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ವಹಿವಾಟುಗಳನ್ನು ಹೇಗೆ ಮಾಡಲಾಗಿದೆ ಎಂದು ನನಗೆ ತಿಳಿದಿಲ್ಲ” ಎಂದು ಪ್ರಮೋದ್ ಕುಮಾರ್ ದಂಡೋಟಿಯಾ ಹೇಳಿದ್ದಾರೆ. ಸದ್ಯ ಅವರು ಮತ್ತು ಮನೆಯವರು ಶಾಕ್‌ಗೆ ಒಳಗಾಗಿದ್ದಾರೆ.
ʼʼಆದಾಯ ತೆರಿಗೆಯಿಂದ ಮಾಹಿತಿ ಪಡೆದ ಕೂಡಲೇ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿದ್ದೇನೆʼʼ ಎಂದು ಅವರು ವಿವರಿಸಿದ್ದಾರೆ. ಹಲವು ಬಾರಿ ಪೊಲೀಸರಿಗೆ ದೂರು ನೀಡಲು ಪ್ರಯತ್ನಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶುಕ್ರವಾರ (ಮಾರ್ಚ್ 30) ಮತ್ತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ದೂರು ದಾಖಲಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಶಿಯಾಜ್ ಕೆ.ಎಂ. ಮಾತನಾಡಿ, ”ಪ್ರಮೋದ್ ಕುಮಾರ್ ದಂಡೋಟಿಯಾ ತಮ್ಮ ಬ್ಯಾಂಕ್ ಖಾತೆಯಿಂದ 46 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ನಡೆದಿದೆ ಎಂಬ ದೂರು ಬಂದಿದೆ. ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಅವರ ಪ್ಯಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಂಡು ಅದರ ಮೂಲಕ ಕಂಪೆನಿಯನ್ನು ನೋಂದಾಯಿಸಲಾಗಿದೆ ಮತ್ತು ಇಷ್ಟು ದೊಡ್ಡ ಮೊತ್ತದ ವಹಿವಾಟುಗಳನ್ನು ಮಾಡಲಾಗಿದೆ” ಎಂದು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Money Guide: ಸೈಬರ್ ಅಪರಾಧದ ಹೊಸ ತಂತ್ರ ʼಮನಿ ಮ್ಯೂಲ್ʼ; ಈ ಮೋಸದ ಬಲೆಗೆ ಬೀಳದಿರಲು ಹೀಗೆ ಮಾಡಿ