ನವ ದೆಹಲಿ: ಕೆಲವು ವಿಧದ ಹಣಕಾಸು ವರ್ಗಾವಣೆಗಳಿಗೆ ಪ್ಯಾನ್ ಕಾರ್ಡ್ ಅಗತ್ಯವನ್ನು ಮುಂಬರುವ 2023-24ರ ಬಜೆಟ್‌ನಲ್ಲಿ ರದ್ದುಪಡಿಸುವ ಸಾಧ್ಯತೆ ಇದೆ.
ಆಧಾರ್ ಆಧಾರಿತ ಕೆಲವು ಹಣಕಾಸು ವರ್ಗಾವಣೆಗಳಿಗೆ ( Aadhaar backed financial transactions) ಪ್ಯಾನ್ ಕಾರ್ಡ್ ಅಗತ್ಯ ರದ್ದಾಗುವ ನಿರೀಕ್ಷೆ ಇದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಮನವಿಯ ಮೇರೆಗೆ ನಿಯಮಾವಳಿಗಳನ್ನು ಸರಳಗೊಳಿಸಲು ಹಣಕಾಸು ಸಚಿವಾಲಯ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 206ಎಎ ಪ್ರಕಾರ ಇಬ್ಬರು ತೆರಿಗೆದಾರರ ನಡುವೆ ಹಣಕಾಸು ವರ್ಗಾವಣೆಗಳ ಸಂದರ್ಭ ಟಿಡಿಎಸ್ ಕಡಿತ ಅನ್ವಯವಾಗುವಾಗ, ಪ್ಯಾನ್ ಕಾರ್ಡ್ ಒದಗಿಸದಿದ್ದರೆ 20% ಹೆಚ್ಚುವರಿ ಟಿಡಿಎಸ್ ಕಡಿತಗೊಳಿಸಲು ಅವಕಾಶ ಇದೆ. ಉದಾಹರಣೆಗೆ ಪೂಜಾ ಎನ್ನುವವರು ಸೋನಿಯಾ ಅವರಿಗೆ ವೃತ್ತಿಪರ ಶುಲ್ಕವಾಗಿ 1 ಲಕ್ಷ ರೂ. ನೀಡಬೇಕು ಎಂದಿಟ್ಟುಕೊಳ್ಳಿ. ಸೋನಿಯಾ ಅವರು 10% ಟಿಡಿಎಸ್ ಕಡಿತಕ್ಕಾಗಿ ಪೂಜಾ (Payer) ಅವರಿಗೆ ತಮ್ಮ ಪ್ಯಾನ್ ವಿವರ ಒದಗಿಸದಿದ್ದರೆ, ಅದಕ್ಕಾಗಿ ಹೆಚ್ಚುವರಿ 10% ಪಾವತಿಸಬೇಕಾಗುತ್ತದೆ. ಒಟ್ಟು 20% ಟಿಡಿಎಸ್ ಆಗುತ್ತದೆ. ಪೂಜಾ ಅವರು ನೀಡುವ 1 ಲಕ್ಷ ರೂ.ಗಳಲ್ಲಿ 20,000 ರೂ. ಟಿಡಿಎಸ್ ಆಗಿ ಕಡಿತವಾಗುತ್ತದೆ. ಹೀಗಾಗಿ ಪ್ಯಾನ್ ಕಾರ್ಡ್ ವಿವರ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಟಿಡಿಎಸ್ ಕಡಿತವಾಗುತ್ತದೆ. ಹೀಗಾಗಿ ಈ ಅತಾರ್ಕಿಕ ತೆರಿಗೆ ನಿಯಮವನ್ನು ರದ್ದುಪಡಿಸಬೇಕು ಎಂದು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮನವಿ ಮಾಡಿವೆ. ಇದಕ್ಕೆ ಮತ್ತೊಂದು ಕಾರಣವೂ ಇದೆ.
ಈಗ ಬಹುತೇಕ ಎಲ್ಲ ಬ್ಯಾಂಕ್ ಖಾತೆಗಳೂ ಆಧಾರ್ ಜತೆ ಲಿಂಕ್ ಆಗಿವೆ. ಕೆಲವು ಹಣಕಾಸು ವರ್ಗಾವಣೆಗಳಿಗೆ ಬಳಕೆದಾರರು ಪ್ಯಾನ್ ಕಾರ್ಡ್ ಬದಲಿಗೆ ಆಧಾರ್ ಕಾರ್ಡ್ ಸಂಖ್ಯೆ ಬಳಸಬಹುದು ಎಂದು ಬ್ಯಾಂಕ್‌ಗಳೂ ತಿಳಿಸಿವೆ. ಮಾತ್ರವಲ್ಲದೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139 ಎ(5ಇ) ಪ್ರಕಾರವೂ ಕೆಲವು ವರ್ಗಾವಣೆಗೆಳಿಗೆ ಪ್ಯಾನ್ ಕಾರ್ಡ್ ಬದಲು ಆಧಾರ್ ಬಳಸಬಹುದು.
ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಮಿತಿಗಿಂತ ಕೆಳಗಿನ ಹಣಕಾಸು ವರ್ಗಾವಣೆಗೆ ಪ್ಯಾನ್ ಅನಗತ್ಯ ಎಂಬ ಸುಧಾರಿತ ನಿಯಮ ಬಜೆಟ್‌ನಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ.