ಹೊಸದಿಲ್ಲಿ: ಬ್ಯಾಂಕ್, ಅಂಚೆ ಇಲಾಖೆ, ಸಹಕಾರ ಬ್ಯಾಂಕ್‌ಗಳಲ್ಲಿ ನಗದು ವ್ಯವಹಾರಗಳಿಗೆ ಸಂಬಂಧಿಸಿ ಸರಕಾರ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಒಂದು ವರ್ಷಕ್ಕೆ 20 ಲಕ್ಷ ರೂ.ಗಿಂತ ಹೆಚ್ಚಿನ ನಗದನ್ನು ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಖಾತೆಗಳಲ್ಲಿ ಠೇವಣಿ ಇಟ್ಟಿದ್ದರೆ ಅಥವಾ ಹಿಂತೆಗೆದುಕೊಂಡಿದ್ದರೆ, ಪ್ಯಾನ್ ಅಥವಾ ಆಧಾರ್ ವಿವರಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ.
ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಮಂಗಳವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಮೇ ೨೬ರಂದು ಹೊಸ ನಿಯಮಗಳು ಜಾರಿಯಾಗಲಿವೆ. ಬ್ಯಾಂಕ್‌ಗಳಲ್ಲಿ ಚಾಲ್ತಿ ಖಾತೆ (current account) ತೆರೆಯಲು ಪ್ಯಾನ್, ಆಧಾರ್ ವಿವರ ಸಲ್ಲಿಸಬೇಕಾಗುತ್ತದೆ.
ನಗದು ವ್ಯವಹಾರಕ್ಕೆ ಹೊಸ ನಿಯಮವೇನು?
-ಒಂದು ವರ್ಷದಲ್ಲಿ 20 ಲಕ್ಷ ರೂ. ಅಥವಾ ಹೆಚ್ಚು ನಗದನ್ನು ಬ್ಯಾಂಕ್, ಅಂಚೆ, ಸಹಕಾರ ಬ್ಯಾಂಕ್ ಗಳ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಖಾತೆಗಳಲ್ಲಿ ಜಮೆ ಮಾಡಿದರೆ ಪ್ಯಾನ್ ಅಥವಾ ಆಧಾರ್ ವಿವರ ಸಲ್ಲಿಸಬೇಕು.
- ಬ್ಯಾಂಕ್, ಅಂಚೆ ಕಚೇರಿ, ಸಹಕಾರ ಬ್ಯಾಂಕ್ ಗಳಲ್ಲಿ ಒಂದು ಅಥವಾ ಹೆಚ್ಚಿನ ಒಂದಕ್ಕಿಂತ ಹೆಚ್ಚಿನ ಖಾತೆಗಳಲ್ಲಿ ಇಡೀ ವರ್ಷದಲ್ಲಿ ಒಟ್ಟಾಗಿ ಅಥವಾ ಒಂದೇ ಸಲಕ್ಕೆ ೨೦ ಲಕ್ಷ ರೂ. ಅಥವಾ ಹೆಚ್ಚು ನಗದನ್ನು ಹಿಂತೆಗೆದುಕೊಂಡರೆ ಪ್ಯಾನ್ ಅಥವಾ ಆಧಾರ್ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
- ಬ್ಯಾಂಕ್ನಲ್ಲಿ ಕರೆಂಟ್ ಅಕೌಂಟ್ ಅಥವಾ ಕ್ಯಾಶ್ ಕ್ರೆಡಿಟ್ ಅಕೌಂಟ್ ತೆರೆಯಲು ಪ್ಯಾನ್ ಅಥವಾ ಆಧಾರ್ ವಿವರಗಳನ್ನು ನೀಡಬೇಕು.
ಈ ಹಿಂದೆ ನಿಯಮವೇನಿತ್ತು?
ಈ ಹಿಂದೆ ಬ್ಯಾಂಕ್ ಗಳಲ್ಲಿ ಒಂದು ದಿನಕ್ಕೆ 50,000 ರೂ.ಗಿಂತ ಹೆಚ್ಚಿನ ನಗದನ್ನು ಠೇವಣಿ ಇಟ್ಟರೆ ಪ್ಯಾನ್ ಕಡ್ಡಾಯವಾಗಿತ್ತು. ಆದರೆ ನಗದು ಠೇವಣಿ ಇಡಲು ಯಾವುದೇ ವಾರ್ಷಿಕ ಮಿತಿ ಇದ್ದಿರಲಿಲ್ಲ.
ನಗದು ಹಿಂತೆಗೆತಕ್ಕೆ ಯಾವುದೇ ಮೊತ್ತವಾದರೂ ಪ್ಯಾನ್ ಕಡ್ಡಾಯವಾಗಿರಲಿಲ್ಲ.