Site icon Vistara News

Sensex Market Crash | ಜಾಗತಿಕ ಷೇರು ಪೇಟೆಗಳಲ್ಲಿ ತಲ್ಲಣ, ಸೆನ್ಸೆಕ್ಸ್‌ 1,000 ಅಂಕ ಪತನ

stock trader

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ 1,020 ಅಂಕಗಳ ಭಾರಿ ಕುಸಿತಕ್ಕೀಡಾಯಿತು. ಸೆನ್ಸೆಕ್ಸ್‌ 58,098 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. (Sensex Market Crash) ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 302 ಅಂಕ ಕಳೆದುಕೊಂಡು 17,327.35 ಕ್ಕೆ ಸ್ಥಿರವಾಯಿತು.

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆ ಮಾಡಿರುವುದು ಹಾಗೂ ಭವಿಷ್ಯದಲ್ಲಿ ಮತ್ತಷ್ಟು ದರ ಏರಿಕೆಯ ಸುಳಿವು ನೀಡಿರುವುದು ಜಾಗತಿಕ ಷೇರು ಮಾರುಕಟ್ಟೆಗೆ ನಕಾರಾತ್ಮಕ ಪ್ರಭಾವ ಬೀರಿತು.

ಬ್ಯಾಂಕ್‌ಗಳು ಮತ್ತು ಹಣಕಾಸು ವಲಯದ ಷೇರುಗಳು ದಿನದ ಆರಂಭದಿಂದಲೇ ಕುಸಿಯಿತು. ಏಷ್ಯಾದ್ಯಂತ ಷೇರು ಸೂಚ್ಯಂಕಗಳು ಮುಗ್ಗರಿಸಿತು. ಮಹೀಂದ್ರಾ & ಮಹೀಂದ್ರಾ ಫೈನಾನ್ಷಿಯಲ್‌ ಸರ್ವೀಸ್‌ನ ಷೇರು ದರ 8% ಕುಸಿಯಿತು. ಮಹೀಂದ್ರಾ ಫೈನಾನ್ಷಿಯಲ್‌ಗೆ ಆರ್‌ಬಿಐ, ಹೊರಗಿನ ಏಜೆಂಟರನ್ನು ಸಾಲ ಮರು ವಸೂಲಾತಿಗೆ ಬಳಸಕೂಡದು ಎಂದು ನಿರ್ಬಂಧಿಸಿದ ಬೆನ್ನಲ್ಲೇ ಷೇರು ದರ ಇಳಿಯಿತು. ಪವರ್‌ ಗ್ರಿಡ್‌ ಷೇರು ದರ ೮% ಇಳಿಕೆಯಾದರೆ, ಟಾಟಾ ಸ್ಟೀಲ್‌ ಷೇರು ದರ ತುಸು ಚೇತರಿಸಿತು. ಟಾಟಾ ಸ್ಟೀಲ್‌ ಜತೆಗೆ ವಿಲೀನವಾಗಲಿರುವ ಕಂಪನಿಗಳ ಷೇರುಗಳ ದರ ಭಾರಿ ಇಳಿಕೆ ದಾಖಲಿಸಿತು. ಅಪೋಲೊ ಆಸ್ಪತ್ರೆ ಷೇರು ದರ 4.1% ಇಳಿಕೆಯಾಯಿತು. ಬ್ಯಾಂಕಿಂಗ್‌ ವಲಯದ ಬಹುತೇಕ ಷೇರು ದರಗಳು ಕುಸಿಯಿತು. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಷೇರುಗಳೂ ಪತನವಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2,900 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು. ಆಟೊಮೊಬೈಲ್‌, ಪಿಎಸ್‌ಯು ಬ್ಯಾಂಕಿಂಗ್‌, ಲೋಹ, ರಿಯಾಲ್ಟಿ, ಮಾಧ್ಯಮ, ಇಂಧನ, ಮೂಲಸೌಕರ್ಯ ವಲಯದ ಷೇರುಗಳು ನಷ್ಟಕ್ಕೀಡಾಯಿತು.

ಹೂಡಿಕೆದಾರರಿಗೆ 4 ಲಕ್ಷ ಕೋಟಿ ರೂ. ನಷ್ಟ: ಸೆನ್ಸೆಕ್ಸ್‌ ಮತ್ತು ನಿಫ್ಟಿ ಶುಕ್ರವಾರ 1.5% ಇಳಿಕೆ ದಾಖಲಿಸಿದ ಪರಿಣಾಮ ಹೂಡಿಕೆದಾರರಿಗೆ ಸುಮಾರು 4 ಲಕ್ಷ ರೂ. ನಷ್ಟ ಸಂಭವಿಸಿದೆ. ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ 277 ಲಕ್ಷ ಕೋಟಿ ರೂ.ಗೆ ಇಳಿಯಿತು.

ಸೆನ್ಸೆಕ್ಸ್ ಕುಸಿತಕ್ಕೆ ಕಾರಣವೇನು?: ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಈ ವಾರ 0.75% ಬಡ್ಡಿ ದರವನ್ನು ಏರಿಸಿದೆ. ಜತೆಗೆ ಮತ್ತೊಮ್ಮೆ 0.75% ಬಡ್ಡಿ ದರ ಏರಿಸುವ ಸಾಧ್ಯತೆ ಇದೆ. ಇದು ಷೇರು ಪೇಟೆಯನ್ನು ತಲ್ಲಣಗೊಳಿಸಿದೆ.‌

ರೂಪಾಯಿ ಮೇಲೆ ಒತ್ತಡ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 81ಕ್ಕೆ ಕುಸಿದಿರುವುದು ಷೇರು ಪೇಟೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು.

ಬಾಂಡ್‌ಗಳ ಆದಾಯ: ಅಮೆರಿಕದಲ್ಲಿ 10 ವರ್ಷ ಅವಧಿಯ ಬಾಂಡ್‌ಗಳ ಆದಾಯ 3.71%ಕ್ಕೆ ಏರಿತು. ಇದು 2011ರಿಂದೀಚೆಗೆ ಗರಿಷ್ಠ ಬಡ್ಡಿ ಆದಾಯ ಇದಾಗಿದೆ.

ಜಾಗತಿಕ ಷೇರು ಪೇಟೆ ಕುಸಿತ: ಅಮೆರಿಕ, ಜಪಾನ್‌, ಚೀನಾ, ಶಾಂಘೈನಲ್ಲಿ ಷೇರು ಸೂಚ್ಯಂಕಗಳು ಕುಸಿಯಿತು.

ಎಫ್‌ಐಐ ಒಳ ಹರಿವು ಇಳಿಕೆ: ಕಳೆದ ಆಗಸ್ಟ್‌ನಲ್ಲಿ 51,000 ಕೋಟಿ ರೂ. ವಿದೇಶಿ ಸಾಂಸ್ಥಿಕ ಹೂಡಿಕೆಯ ಒಳ ಹರಿವು ಇತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಇದುವರೆಗೆ ಕೇವಲ 10,865 ಕೋಟಿ ರೂ.ಗೆ ಇಳಿದಿದೆ.

ಆರ್‌ಬಿಐ ನೀತಿ: ಆರ್‌ಬಿಐ ಸೆಪ್ಟೆಂಬರ್‌ 30ಕ್ಕೆ ತನ್ನ ಹಣಕಾಸು ನೀತಿ ಪ್ರಕಟಿಸಲಿದ್ದು, ಬಡ್ಡಿ ದರ ಏರಿಕೆ ನಿರೀಕ್ಷಿಸಲಾಗಿದೆ. ಇದು ಕೂಡ ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು.

Exit mobile version