Site icon Vistara News

GST | ಪರೋಟಾ ಅಂದ್ರೆ ರೋಟಿ, ಚಪಾತಿ ಅಲ್ಲ, 18% ಜಿಎಸ್‌ಟಿ ಪಕ್ಕಾ: ಗುಜರಾತ್‌ ಎಎಎಆರ್

parota

ಅಹಮದಾಬಾದ್:‌ ಪರೋಟಾ ಮತ್ತು ರೋಟಿಯನ್ನು ಒಂದೇ ಪದಾರ್ಥದಿಂದ ತಯಾರಿಸಿದರೂ, ಎರಡೂ ಬೇರೆಯಾಗಿದೆ. ಹೀಗಾಗಿ ಅದರ ಮೇಲಿನ ಜಿಎಸ್‌ಟಿ (GST ) ಕೂಡ ವ್ಯತ್ಯಾಸವಾಗಿರುತ್ತದೆ ಎಂದು ಗುಜರಾತ್‌ನಲ್ಲಿನ ಜಿಎಸ್‌ಟಿ ಮೇಲ್ಮನವಿ ಪ್ರಾಧಿಕಾರ (AAAR) ಕಳೆದ ಸೆಪ್ಟೆಂಬರ್‌ 15ರಂದು ಹೊರಡಿಸಿದ ತನ್ನ ಆದೇಶದಲ್ಲಿ ತಿಳಿಸಿದೆ.

ಪರೋಟಾ 18% ಹಾಗೂ ರೋಟಿ ಅಥವಾ ಚಪಾತಿಗೆ ಕೇವಲ 5% ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಗುಜರಾತ್‌ ಜಿಎಸ್‌ಟಿ ಮೇಲ್ಮನವಿ ಪ್ರಾಧಿಕಾರವು ತಿಳಿಸಿದೆ. ಇದರೊಂದಿಗೆ ಗುಜರಾತ್‌ನ ಅಥಾರಿಟಿ ಫಾರ್‌ ಅಡ್ವಾನ್ಸ್‌ ರೂಲಿಂಗ್‌ನ (ಗುಜರಾತ್‌ ಎಎಆರ್)‌ ಆದೇಶವನ್ನು ಎತ್ತಿ ಹಿಡಿದಿದೆ. ಅಹಮದಾಬಾದ್‌ ಮೂಲದ ವಡಿಲಾಲ್‌ ಇಂಡಸ್ಟ್ರೀಸ್‌, ಪರೋಟಾಕ್ಕೆ 18% ಮತ್ತು ರೋಟಿಗೆ ಕೇವಲ 5% ಜಿಎಸ್‌ಟಿ ವಿಧಿಸುವುದನ್ನು ಪ್ರಶ್ನಿಸಿತ್ತು. ವಡಿಲಾಲ್‌ ಇಂಡಸ್ಟ್ರೀಸ್‌ ಎಂಟು ಬಗೆಯ ಪರೋಟಾಗಳನ್ನು ಮಾರುತ್ತಿತ್ತು. ಇದರಲ್ಲಿ ಆಲೂ ಪರೋಟಾ, ಈರುಳ್ಳಿ ಪರೋಟಾ, ತರಕಾರಿ ಪರೋಟಾ ಇತ್ಯಾದಿಗಳಿದ್ದವು.

ಇದೇ ರೀತಿಯ ಆದೇಶವನ್ನು ಕೇರಳದಲ್ಲಿನ ಜಿಎಸ್‌ಟಿ ಮೇಲ್ಮನವಿ ಪ್ರಾಧಿಕಾರ (Kerala AAR) ಕೂಡ ಈ ಹಿಂದೆ ಹೊರಡಿಸಿತ್ತು. ಕ್ಲಾಸಿಕ್‌ ಮಲಬಾರ್‌ ಪರೋಟಾ ಮತ್ತು ಮಲಬಾರ್‌ ಪರೋಟಾಕ್ಕೆ 18% ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಆದೇಶಿಸಿತ್ತು.

ಜಿಎಸ್‌ಟಿ ಜಾರಿಗೆ ಬಂದು ಐದು ವರ್ಷ ಉರುಳಿದ್ದರೂ, ಇಂಡಸ್ಟ್ರಿ ಮತ್ತು ತೆರಿಗೆ ಇಲಾಖೆಯ ನಡುವೆ ಕೆಲ ವಸ್ತುಗಳ ಮೇಲಿನ ಜಿಎಸ್‌ಟಿ ವಿಚಾರದಲ್ಲಿ ವಿವಾದ ಈಗಲೂ ಮುಂದುವರಿದಿದೆ. ಕೆಲ ವಸ್ತುಗಳನ್ನು ಜಿಎಸ್‌ಟಿ ದರದ ಯಾವ ಶ್ರೇಣಿಗೆ ಹಾಕಬೇಕು ಎಂಬುದರ ಬಗ್ಗೆ ಗೊಂದಲ ಇದೆ. ಗೋಧಿ ಹಿಟ್ಟಿನಿಂದ ತಯಾರಿಸುವ ಚಪಾತಿ, ರೋಟಿ ಮತ್ತು ಪರೋಟಾ ನಡುವಣ ಜಿಎಸ್‌ಟಿ ದರದ ವ್ಯತ್ಯಾಸ ಕೂಡ ಅಂಥ ಸಮಸ್ಯೆಯಾಗಿತ್ತು.

Exit mobile version