Site icon Vistara News

Paytm Layoffs: ಪೇಟಿಎಂನಲ್ಲಿ ಉದ್ಯೋಗ ಕಡಿತದ ಭೀತಿ; ಎಷ್ಟು ಮಂದಿಗೆ ಗೇಟ್‌ಪಾಸ್‌?

paytm office

paytm office

ನವದೆಹಲಿ: ಪೇಟಿಎಂ (Paytm) ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ (One 97 Communications) ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆಯ ಭಾಗವಾಗಿ ತನ್ನ ಎಲ್ಲ ವಿಭಾಗಗಳಲ್ಲಿ ಉದ್ಯೋಗಿಗಳನ್ನು ಕಡಿತ ಮಾಡಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ (Paytm Layoffs). ಆರ್​ಬಿಐಯ ಕಠಿಣ ಕ್ರಮಕ್ಕೆ ತುತ್ತಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ (Paytm Payments Bank) ಬಹುತೇಕ ಚಟುವಟಿಕೆ ನಾಳೆ (ಮಾರ್ಚ್ 15) ಸ್ಥಗಿತಗೊಳ್ಳಲಿದೆ. ಇದರ ನಡುವೆ ಈ ಬೆಳವಣಿಗೆ ನಡೆದಿದೆ.

ಉದ್ಯೋಗ ಕಳೆದುಕೊಳ್ಳಲಿರುವವರ ನಿಖರ ಸಂಖ್ಯೆಯನ್ನು ಕಂಪೆನಿ ಬಹಿರಂಗಪಡಿಸಲಾಗಿಲ್ಲವಾದರೂ ಎರಡು ವಾರಗಳಲ್ಲಿ ತಂಡದ ಗಾತ್ರವನ್ನು ಶೇ. 20ರವರೆಗೆ ಕಡಿಮೆ ಮಾಡಲು ಕೆಲವು ವಿಭಾಗಗಳಿಗೆ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಕಂಪೆನಿ ಹೇಳಿದ್ದೇನು?

ʼʼವಾರ್ಷಿಕವಾಗಿ ಪೇಟಿಎಂನಲ್ಲಿ ಮೌಲ್ಯಮಾಪನ ನಡೆಯುತ್ತಿದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ. ಇದು ಕೆಲವು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದುʼʼ ಎಂದು ಪೇಟಿಎಂ ವಕ್ತಾರರು ತಿಳಿಸಿದ್ದಾರೆ. ʼʼಎಷ್ಟು ಪ್ರಮಾಣದ ನೌಕರರು ಹೊರಬೀಳಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಕಾರ್ಯಕ್ಷಮತೆಯ ಕಾರಣಕ್ಕಿಂತ ಹೆಚ್ಚಾಗಿ ಕೃತಕ ಬುದ್ಧಿಮತ್ತೆ (AI)ಯನ್ನು ಕೆಲವು ವಿಭಾಗಗಳಲ್ಲಿ ಅಳವಡಿಸಿಕೊಳ್ಳಲು ಕಂಪೆನಿ ತೀರ್ಮಾನಿಸಿದೆʼʼ ಮೂಲಗಳು ಹೇಳಿವೆ.

ʼʼನಾವು ವಾರ್ಷಿಕ ಮೌಲ್ಯಮಾಪನ ನಡೆಸುತ್ತಿದ್ದೇವೆ. ಇದು ಎಲ್ಲ ಕಂಪೆನಿಗಳಲ್ಲಿ ಸಾಮಾನ್ಯ ಪ್ರಕ್ರಿಯೆ. ಈ ವೇಳೆ ನಿರ್ವಹಣೆಯ ಆಧಾರದ ಮೇಲೆ ಮೌಲ್ಯಮಾಪಗಳನ್ನು ನಡೆದು, ಕೆಲವು ಬದಲಾವಣೆಗೆ ಕಾರಣವಾಗುತ್ತದೆ. ಈ ಮೂಲಕ ಕೆಲವರಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಇದು ಲೇಆಫ್‌ ಪ್ರಕ್ರಿಯೆಗಿಂತ ಭಿನ್ನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಐ ಅಳವಡಿಕೆ

”ನಮ್ಮ ಕಾರ್ಯ ಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಎಐ ಅನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಕೆಲವು ಪಾತ್ರಗಳು ಮತ್ತು ಕಾರ್ಯಗಳನ್ನು ಮರು ವ್ಯಾಖ್ಯಾನಿಸುವ ಅನಿವಾರ್ಯೆ ಇದೆ. ಇದನ್ನು ಉದ್ಯೋಗ ಕಡಿತ ಎನ್ನಲು ಸಾಧ್ಯವಿಲ್ಲʼʼ ಎಂದು ವಕ್ತಾರರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೆಲ ಉದ್ಯೋಗಿಗಳು, ʼʼಈಗಾಗಲೇ ಕೆಲವು ಸಿಬ್ಬಂದಿಗೆ ಒಂದು ತಿಂಗಳ ಫರ್ಫಾಮೆನ್ಸ್‌ ಇಂಪ್ರೂವ್‌ಮೆಂಟ್‌ ಪ್ಲ್ಯಾನ್‌ (Performance Improvement Plan) ನೀಡಲಾಗಿದೆ. ಜತೆಗೆ ಅವರನ್ನು ಕೆಲಸದಿಂದ ವಜಾ ಮಾಡುವ ಪತ್ರವನ್ನೂ ಕಳುಹಿಸಲಾಗಿದೆ. ಇದು ಯಾವುದೇ ಪ್ಯಾಕೇಜ್‌ ಅನ್ನು ಒಳಗೊಂಡಿಲ್ಲʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Paytm: ನಾಳೆಯಿಂದ ಪೇಟಿಎಂಗೆ ನಿರ್ಬಂಧ; ನಿಮ್ಮ ಆ್ಯಪ್‌ನಲ್ಲಿ ಏನಿರತ್ತೆ? ಏನಿರಲ್ಲ?

ʼʼಕಂಪನಿಯು ಎಐ ಅಳವಡಿಸಿಕೊಂಡ ನಂತರ 2023ರ ಡಿಸೆಂಬರ್‌ನಲ್ಲಿ 1,000 ಪಿಂಕ್ ಸ್ಲಿಪ್‌ಗಳನ್ನು ನೀಡಲಾಗಿತ್ತು. ಈ ಬಾರಿ ಅದಕ್ಕಿಂತ ಅಧಿಕ ಜನರನ್ನು ಕೈ ಬಿಡಲಾಗುತ್ತಿದೆ ಎಂಬ ಊಹಾಪೋಹಗಳಿವೆʼʼ ಎಂದು ಉದ್ಯೋಗಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಸದ್ಯ ಪೇಟಿಎಂನಲ್ಲಿ 6 ಸಾವಿರಕ್ಕಿಂತ ಅಧಿಕ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅನಿಶ್ಚಿತತೆಗಳ ನಡುವೆ ಹಲವು ಉದ್ಯೋಗಿಗಳು ಈಗಾಗಲೇ ಸಕ್ರಿಯವಾಗಿ ಪರ್ಯಾಯ ಅವಕಾಶಗಳನ್ನು ಹುಡುಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version