Site icon Vistara News

Paytm share buyback | ಪೇಟಿಎಂನಿಂದ ಪ್ರತಿ ಷೇರಿಗೆ 810 ರೂ.ಗಳಂತೆ ಮರು ಖರೀದಿ, ಷೇರುದಾರರಿಗೆ ಲಾಭವೇನು?

paytm

ನವ ದೆಹಲಿ: ಪೇಟಿಎಂನ ಮಾತೃ ಕಂಪನಿ ವನ್‌ 97 ಕಮ್ಯುನಿಕೇಶನ್ಸ್‌, ತನ್ನ 850 ಕೋಟಿ ರೂ. ಮೌಲ್ಯದ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮರು ಖರೀದಿ (Paytm share buyback) ಮಾಡುವುದಾಗಿ ಮಂಗಳವಾರ ತಿಳಿಸಿದೆ. ಪ್ರತಿ ಷೇರಿಗೆ 810 ರೂ.ಗಳ ಲೆಕ್ಕದಲ್ಲಿ ಷೇರುಗಳ ಮರು ಖರೀದಿ ನಡೆಯಲಿದೆ.

ಪೇಟಿಎಂ ಒಟ್ಟು 1,04,93,827 ಷೇರುಗಳನ್ನು ಮರು ಖರೀದಿಸಲು ನಿರ್ಧರಿಸಿದೆ. ಪೇಟಿಎಂ ಷೇರು ದರ ಬುಧವಾರ 530 ರೂ. ಆಗಿತ್ತು.

ಷೇರು ಮರು ಖರೀದಿ ಏಕೆ?

ಕಂಪನಿಗಳು ತಮ್ಮ ಲಾಭಾಂಶವನ್ನು ಡಿವಿಡೆಂಡ್‌ ಅಥವಾ ಷೇರುಗಳ ಮರು ಖರೀದಿ ಮೂಲಕ ಷೇರುದಾರರಿಗೆ ವಿತರಿಸಬಹುದು. ಷೇರುಗಳ ದರ ತೀವ್ರ ಕುಸಿದರೆ, ಷೇರುದಾರರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಮರು ಖರೀದಿಸಬಹುದು.

ಪೇಟಿಎಂ ಷೇರುದಾರರಿಗೆ ಲಾಭದಾಯಕವೇ?

ಪೇಟಿಎಂನ ಐಪಿಒದಲ್ಲಿ ಷೇರು ದರ 2,150 ರೂ.ಗಳಾಗಿತ್ತು. ಆದರೆ ಇಲ್ಲಿಯವರೆಗೆ 75% ದರ ಕುಸಿತಕ್ಕೀಡಾಗಿತ್ತು. ಸದ್ಯ 530 ರೂ.ಗಳ ಕೆಳಮಟ್ಟದಲ್ಲಿದೆ. ಹೀಗಾಗಿ 2,150 ರೂ.ಗೆ ಐಪಿಒದಲ್ಲಿ ಷೇರು ಖರೀದಿಸಿದವರಿಗೆ ಷೇರುಗಳ ಮರು ಖರೀದಿಯಿಂದ ಪ್ರಯೋಜನವಿಲ್ಲ. 810 ರೂ.ಗಿಂತ ಕಡಿಮೆ ದರದಲ್ಲಿ ಷೇರುಗಳನ್ನು ಖರೀದಿಸಿದ್ದವರಿಗೆ ಮಾತ್ರ ಲಾಭದಾಯಕವಾಗಬಹುದು.

ಪೇಟಿಎಂನ ಟಾಪ್‌ ಮ್ಯಾನೇಜ್‌ಮೆಂಟ್‌ ಮತ್ತು ಸಂಸ್ಥಾಪಕ, ಸಿಇಒ ವಿಜಯ್‌ ಶೇಖರ್‌ ಶರ್ಮಾ ಈ ಷೇರು ವಿಕ್ರಯದಲ್ಲಿ ಭಾಗವಹಿಸುತ್ತಿಲ್ಲ. ಪೇಟಿಎಂನ ಭವಿಷ್ಯದ ಯೋಜನೆಗಳ ಜಾರಿಗೆ ಹಣಕಾಸು ಸಂಪನ್ಮೂಲವನ್ನು ಸಂಗ್ರಹಿಸಲಾಗುತ್ತಿದೆ. ಸೇಲ್ಸ್‌, ಮಾರ್ಕೆಟಿಂಗ್‌, ಟೆಕ್ನಾಲಜಿಗೆ ಹೂಡಿಕೆ ಮಾಡಬೇಕಾಗಿದೆ. ಷೇರುದಾರರಿಗೂ ಸೂಕ್ತ ಮೌಲ್ಯವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಶರ್ಮಾ ತಿಳಿಸಿದ್ದಾರೆ.

ಪೇಟಿಎಂನಲ್ಲಿ 72.85% ಷೇರು ನಿಯಂತ್ರಣವನ್ನು ವಿದೇಶಿ ಹೂಡಿಕೆದಾರರು ಹೊಂದಿದ್ದಾರೆ. ದೇಶೀ ಸಾಂಸ್ಥಿಕ ಹೂಡಿಕೆದಾರರು ಕೇವಲ 1.82 ಷೇರುಗಳನ್ನು ಹೊಂದಿದ್ದಾರೆ. ಕಾರ್ಪೊರೇಟ್‌ ಮತ್ತು ಇತರರ ಕೈಯಲ್ಲಿ 25.33% ಷೇರುಗಳ ಮಾಲಿಕತ್ವ ಇದೆ.

Exit mobile version