ನವ ದೆಹಲಿ: ಹಣದುಬ್ಬರ ( Inflation) ಅಥವಾ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ತಗ್ಗಿಸಲು ಪರಿಶೀಲಿಸುತ್ತಿದೆ. ಒಂದು ವೇಳೆ ತೆರಿಗೆ ಹೊರೆ ಇಳಿದರೆ, ದರ ಕೂಡ ತಗ್ಗಲಿದೆ ಎಂದು ಮೂಲಗಳು ತಿಳಿಸಿವೆ. ಹೀಗಿದ್ದರೂ, ಫೆಬ್ರವರಿಯ ಹಣದುಬ್ಬರ ಅಂಕಿ ಅಂಶಗಳನ್ನು ಗಮನಿಸಿದ ಬಳಿಕ ಸರ್ಕಾರ ನಿರ್ಧರಿಸಲಿದೆ ಎಂದು ವರದಿಯಾಗಿದೆ. ಕಳೆದ ಡಿಸೆಂಬರ್‌ನಲ್ಲಿ 5.72% ರಷ್ಟಿದ್ದ ಹಣದುಬ್ಬರವು ಜನವರಿಯಲ್ಲಿ 6.52%ಕ್ಕೆ ಏರಿಕೆಯಾಗಿತ್ತು.
ಆಹಾರ ಹಣದುಬ್ಬರ ಉನ್ನತ ಮಟ್ಟದದಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಹಾಲು, ಜೋಳ, ಸೋಯಾ ಎಣ್ಣೆಯ ದರ ಏರಿಕೆ ಹಣದುಬ್ಬರದ ಏರುಗತಿಗೆ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಇತ್ತೀಚಿನ ತಿಂಗಳುಗಳಲ್ಲಿ ಸ್ಥಿರತೆಯತ್ತ ಸಾಗಿದೆ. ತೈಲ ಕಂಪನಿಗಳು ಆಮದು ವೆಚ್ಚದಲ್ಲಿ ಉಂಟಾಗುತ್ತಿರುವ ಉಳಿತಾಯವನ್ನು ಹಳೆಯ ನಷ್ಟದ ಭರ್ತಿಗೆ ಬಳಸುತ್ತಿವೆ.
ಭಾರತವು ತನ್ನ ಮೂರನೇ ಎರಡರಷ್ಟು ತೈಲ ಬೇಡಿಕೆಯನ್ನು ಆಮದು ಮೂಲಕ ಭರಿಸುತ್ತದೆ. ಕೇಂದ್ರ ಸರ್ಕಾರದ ತೆರಿಗೆ ಕಡಿತದಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಹಣದುಬ್ಬರ ತಗ್ಗಿಸಲು ನೆರವಾಗಲಿದೆ ಎನ್ನುತ್ತಾರೆ ತಜ್ಞರು. ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಆರ್‌ಬಿಐನ 6%ರ ಗುರಿಯನ್ನು ಮೀರಿತ್ತು.