ಬೆಂಗಳೂರು: ಕರ್ನಾಟಕದಲ್ಲಿ ಪೆಟ್ರೋಲಿಯಂ ಡೀಲರ್‌ಗಳು ಮೇ 31 ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಅಂದು ತೈಲವನ್ನು ಖರೀದಿಸದಿರಲು ತೀರ್ಮಾನಿಸಿದ್ದಾರೆ.
ಕೇಂದ್ರ ಸರಕಾರ ಅಬಕಾರಿ ಸುಂಕ ಕಡಿತಗೊಳಿಸಿರುವುದರಿಂದ ಡೀಲರ್‌ಗಳಿಗೆ ವ್ಯಾಪಾರದಲ್ಲಿ ಗಣನೀಯ ನಷ್ಟವಾಗುತ್ತಿದೆ. ಇದಕ್ಕೆ ಕೇಂದ್ರ ಸರಕಾರ ಪರಿಹಾರ ನೀಡಬೇಕು ಎಂದು ಪೆಟ್ರೋಲಿಯಂ ಡೀಲರ್‌ಗಳು ದೂರಿದ್ದಾರೆ.
ಹೀಗಿದ್ದರೂ, ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳು ಮುಷ್ಕರದ ದಿನವಾದ ಮೇ 31 ರಂದು ಎಂದಿನಂತೆ ತೆರೆಯಲಿವೆ. ಡೀಲರ್‌ಗಳು ಮೂರು ದಿನಗಳಿಗೆ ಆಗುವಷ್ಟು ತೈಲವನ್ನು ಮೊದಲೇ ಖರೀದಿಸಿರುತ್ತಾರೆ. ಆದ್ದರಿಂದ ಜನತೆಗೆ ತೊಂದರೆ ಆಗದು ಎಂದು ಡೀಲರ್ ಗಳು ತಿಳಿಸಿದ್ದಾರೆ. ಹೀಗಿದ್ದರೂ ಕೆಲವೆಡೆ ಪೆಟ್ರೋಲ್ ಬಂಕ್‌ಗಳಲ್ಲಿ ” ನೊ ಸ್ಟಾಕ್ ಬೋರ್ಡ್ʼʼ ಕಾಣಿಸುವ ಸಾಧ್ಯತೆ ಇದೆ.
ಪೆಟ್ರೋಲ್-ಡೀಸೆಲ್ ಡೀಲರ್‌ಗಳ ಬೇಡಿಕೆ ಏನು?
- ಪೆಟ್ರೋಲ್-ಡೀಸೆಲ್ ಮಾರಾಟದಲ್ಲಿ ಡೀಲರ್‌ಗಳ ಕಮೀಶನ್ ಹೆಚ್ಚಳ ಮಾಡಬೇಕು.
- ಇತ್ತೀಚಿನ ಅಬಕಾರಿ ಸುಂಕ ಹೆಚ್ಚಳದಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ
ಅನೇಕ ಡೀಲರ್‌ಗಳು ಅಬಕಾರಿ ಸುಂಕ ಕಡಿತಕ್ಕೆ ಮೊದಲೇ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಅಬಕಾರಿ ಸುಂಕ ಕಡಿತದ ಪರಿಣಾಮ ಅವರಿಗೆ ಈಗ ಕಡಿಮೆ ದರದಲ್ಲಿ ಮಾರಾಟದಿಂದ ನಷ್ಟ ಉಂಟಾಗಲಿದೆ. ಈ ನಷ್ಟವನ್ನು ಕೇಂದ್ರ ಸರಕಾರ ಭರಿಸಬೇಕು ಎಂದು ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಒತ್ತಾಯಿಸಿದೆ. ಸರಕಾರ ಕಳೆದ ವರ್ಷ ನವೆಂಬರ್ ಮತ್ತು ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕವನ್ನು ಕಡಿತಗೊಳಿಸಿರುವುದರಿಂದ ಪ್ರತಿ ಡೀಲರ್‌ಗೆ 5-10ಲಕ್ಷ ರೂ. ನಷ್ಟವಾಗಿದೆ. ಈ ನಷ್ಟವನ್ನು ಸರಕಾರ ಭರಿಸಿಕೊಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಬಸವೇಗೌಡ ಅವರು ಒತ್ತಾಯಿಸಿದ್ದಾರೆ.
ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಮೇ 31ರಂದು ನಾವು ಪೆಟ್ರೋಲ್ ಖರೀದಿಸುವುದಿಲ್ಲ ಎಂದು ಡೀಲರ್ ಗಳು ತಿಳಿಸಿದ್ದಾರೆ. ಹೀಗಿದ್ದರೂ ಗ್ರಾಹಕರಿಗೆ ಪೆಟ್ರೋಲ್-ಡೀಸೆಲ್ ಮಾರಾಟ ಮುಂದುವರಿಯಲಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಎ ತಾರಾನಾಥ್ ತಿಳಿಸಿದ್ದಾರೆ.
ಕೇಂದ್ರ ಸರಕಾರ ಯಾವುದೇ ನೋಟಿಸ್ ನೀಡದೆ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇದರಿಂದ ಡೀಲರ್ ಗಳಿಗೆ ಕಷ್ಟವಾಗಿದೆ. ಡೀಲರ್ ಗಳ ಕಮಿಶನ್ ಹೆಚ್ಚಿಸುವಂತೆ 2017ರಿಂದಲೂ ನಾವು ಒತ್ತಾಯಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ರೋಲಿಯಂ ಡೀಲರ್ ಗಳು ನಷ್ಟ ಅನುಭವಿಸುತ್ತಿದ್ದಾರೆ. ಮಾಸಿಕ 60-100 ಕಿಲೋಲೀಟರ್ ಮಾರಾಟ ಮಾಡುವವರಿಗೆ ಸಂಕಷ್ಟವಾಗುತ್ತಿದೆ ಎಂದರು. ಕೇಂದ್ರ ಸರಕಾರ ಮೇ 22ರಂದು ಪೆಟ್ರೋಲ್ ಮೇಲೆ ಲೀಟರ್ ಗೆ 8 ರೂ. ಹಾಗೂ ಡೀಸೆಲ್ ಮೇಲೆ ಲೀಟರ್‌ಗೆ 6 ರೂ. ಅಬಕಾರಿ ಸುಂಕ ಕಡಿತಗೊಳಿಸಿತ್ತು.