ನವ ದೆಹಲಿ: ಬಿಜೆಪಿಯೇತರ ಸರ್ಕಾರಗಳಿರುವ 6 ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ವ್ಯಾಟ್ ತೆರಿಗೆ ಇಳಿಕೆಯಾಗಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ (Petrol rate) ಅವರು ಲೋಕಸಭೆಗೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಜಾರ್ಖಂಡ್, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್ (VAT) ಅನ್ನು ಇಳಿಸಿಲ್ಲ. ಹೀಗಾಗಿ ಈ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಉನ್ನತ ಮಟ್ಟದಲ್ಲಿ ಇವೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಕೆಲ ರಾಜ್ಯಗಳೂ ವ್ಯಾಟ್ ಕಡಿತಗೊಳಿಸಿವೆ. ಆದರೆ ಬಿಜೆಪಿಯೇತರ ಆಳ್ವಿಕೆಯ ಆರು ರಾಜ್ಯಗಳು ಇಳಿಸಿಲ್ಲ ಎಂದು ತಿಳಿಸಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ದರ ಏರಿಕೆಯಿಂದ ಸಾರ್ವಜನಿಕ ತೈಲ ಕಂಪನಿಗಳಿಗೆ ಒಟ್ಟಾಗಿ 27,276 ಕೋಟಿ ರೂ. ನಷ್ಟವಾಗಿದೆ ಎಂದರು.
ಕಚ್ಚಾ ತೈಲದ ಖರೀದಿ ದರ, ವಿನಿಮಯ ದರ, ಸಾಗಾಣಿಕೆಯ ಶುಲ್ಕ, ಸಂಸ್ಕರಣೆಯ ವೆಚ್ಚ, ಡೀಲರ್ ಕಮಿಶನ್, ಕೇಂದ್ರದ ಸುಂಕ, ರಾಜ್ಯಗಳ ವ್ಯಾಟ್ ಮತ್ತಿತರ ವೆಚ್ಚಗಳು ತೈಲ ದರವನ್ನು ನಿಗದಿಪಡಿಸುತ್ತದೆ ಎಂದು ವಿವರಿಸಿದರು.