ನವ ದೆಹಲಿ: ಕೇಂದ್ರ ಸರ್ಕಾರ ತನ್ನ ಮಹತ್ತ್ವಾಕಾಂಕ್ಷೆಯ ಪಿಎಲ್‌ಐ ಯೋಜನೆಯನ್ನು ( Production linked scheme- PLI) ಅನ್ನು ಮತ್ತಷ್ಟು ಕ್ಷೇತ್ರಗಳಿಗೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಈ ಸಂಬಂಧ 35,000 ಕೋಟಿ ರೂ.ಗಳ ಪ್ರಸ್ತಾಪಗಳನ್ನು ಪರಿಶೀಲಿಸುತ್ತಿದೆ.
ದೇಶೀಯ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಪಿಎಲ್‌ಐ ಯೋಜನೆಯನ್ನು ಈಗಾಗಲೇ ಹಮ್ಮಿಕೊಂಡಿದೆ. ಮೊಬೈಲ್ ಉತ್ಪಾದನೆಗೆ ಆರಂಭವಾಗಿದ್ದ ಪಿಎಲ್‌ಐ ಪರಿಣಾಮಕಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲೆದರ್, ಬೈಸಿಕಲ್, ಲಸಿಕೆಗೆ ಬೇಕಾಗುವ ಮೆಟೀರಿಯಲ್, ಕೆಲವು ಟೆಲಿಕಾಂ ಉತ್ಪನ್ನಗಳ ಉತ್ಪಾದನೆಗೆ ಪಿಎಲ್‌ಐ ಯೋಜನೆಯನ್ನು ವಿಸ್ತರಿಸಲು ಪರಿಶೀಲನೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರ 14 ಕ್ಷೇತ್ರಗಳಲ್ಲಿ ಪಿಎಲ್‌ಐ ಸ್ಕೀಮ್ ಅನ್ನು ಈಗಾಗಲೇ ವಿಸ್ತರಿಸಿದೆ. ಆಟೊಮೊಬೈಲ್, ಆಟೊ ಬಿಡಿಭಾಗಗಳು, ವೈಟ್ ಗೂಡ್ಸ್, ಫಾರ್ಮಾ, ಜವಳಿ, ಆಹಾರೋತ್ಪನ್ನಗಳು, ಸೋಲಾರ್ ವಿಪಿ ಮಾಡ್ಯುಲ್ಸ್, ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ ಉತ್ಪಾದನೆಗೆ ಪಿಎಲ್‌ಐ ಈಗಾಗಲೇ ಚಾಲ್ತಿಯಲ್ಲಿದೆ. ಯೋಜನೆಯ ವಿಸ್ತರಣೆಗೆ ಸಿದ್ಧತೆ ನಡೆಯುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ.