ನವ ದೆಹಲಿ: ಭಾರತದಲ್ಲಿ ಉತ್ಪಾದನೆ ಆಧರಿತ ಇನ್ಸೆಂಟಿವ್ ( PLI Scheme) ಯೋಜನೆಗಳಿಂದ 45,000 ಕೋಟಿ ರೂ. ಹೂಡಿಕೆ ಹರಿದು ಬಂದಿದೆ. 3 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದೆ. 2 ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆಯೂ ಆಗಿದೆ ಎಂದು ನೀತಿ ಆಯೋಗದ ಸಿಇಒ ಪರಮೇಶ್ವರನ್ ಐಯ್ಯರ್ ತಿಳಿಸಿದ್ದಾರೆ. ಪಿಎಲ್‌ಐ ಯೋಜನೆ ತನ್ನ ಫಲವನ್ನು ನೀಡಲು ಆರಂಭಿಸಿದೆ. ಸರ್ಕಾರ 800 ಕೋಟಿ ರೂ.ಗಳನ್ನು ಈಗಾಗಲೇ ಇನ್ಸೆಂಟಿವ್ ರೂಪದಲ್ಲಿ ನೀಡಿದೆ. ಮಾರ್ಚ್ ಒಳಗೆ 3-4 ಸಾವಿರ ಕೋಟಿ ರೂ. ಇನ್ಸೆಂಟಿವ್ ವಿತರಣೆಯಾಗುವ ನಿರೀಕ್ಷೆ ಇದೆ ಎಂದು ನೀತಿ ಆಯೋಗದ ಸಿಇಒ ಪರಮೇಶ್ವರನ್ ತಿಳಿಸಿದ್ದಾರೆ.
ಪಿಎಲ್‌ಐ ಯೋಜನೆಯು (Production linked incentive) ದೇಶೀಯ ಉತ್ಪಾದನೆಯನ್ನು ಜಾಗತಿಕ ಸ್ಪರ್ಧಾತ್ಮಕತೆಗೆ ಪೂರಕವಾಗಿ ಅಭಿವೃದ್ಧಿಪಡಿಸುವ ಮಹತ್ತ್ವಾಕಾಂಕ್ಷೆಯನ್ನು ಹೊಂದಿದೆ. ಆಟೊಮೊಬೈಲ್, ಆಟೊಮೊಬೈಲ್ ಬಿಡಿಭಾಗಗಳು, ವೈಟ್ ಗೂಡ್ಸ್, ಔಷಧ, ಜವಳಿ, ಆಹಾರ ಸಂಸ್ಕರಣೆ, ಸೋಲಾರ್ ಪಿವಿ ಮಾಡ್ಯುಲ್ಸ್, ವಿಶೇಷ ಉಕ್ಕು ಸೇರಿದಂತೆ 14 ವಲಯಗಳಲ್ಲಿ ಎರಡು ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಉತ್ಪಾದನೆಯಾಗಿದೆ ಎಂದು ತಿಳಿಸಿದ್ದಾರೆ.
ಭಾರತವು 2020ರಲ್ಲಿ ಪಿಎಲ್‌ಐ ಯೋಜನೆಯನ್ನು ಜಾರಿಗೊಳಿಸಿತ್ತು. ಇದು ಭಾರತದಲ್ಲಿ ನಿರ್ದಿಷ್ಟ ವಲಯದಲ್ಲಿನ ಉತ್ಪಾದನೆಗೆ ಮೂರರಿಂದ ಐದು ವರ್ಷಗಳ ತನಕ ನಗದು ಇನ್ಸೆಂಟಿವ್ ನೀಡುತ್ತದೆ.