Site icon Vistara News

India Energy Week 2023: ಮೋದಿ ಬಿಡುಗಡೆಗೊಳಿಸಿದ ಡಬಲ್‌ ಬರ್ನರ್ ಸೋಲಾರ್‌ ಅಡುಗೆ ಒಲೆಯ‌ ವಿಶೇಷವೇನು? ರೇಟ್​ ಎಷ್ಟು?

pm modi inaugurates double burner solar stove in india energy week 2023

#image_title

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾರತ ಇಂಧನ ಸಪ್ತಾಹ-2023ರ (India Energy week 2023) ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ ಉಪಕ್ರಮವಾಗಿರುವ ಡಬಲ್‌ ಬರ್ನರ್‌ ಸೋಲಾರ್‌ ಅಡುಗೆ ಒಲೆ (Double Burner Solar Stove)ಯನ್ನು ಲೋಕಾರ್ಪಣೆ ಮಾಡಿದರು. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಉಜ್ವಲ ಯೋಜನೆ ಜನಪ್ರಿಯವಾಗಿತ್ತು. ಎರಡನೇ ಅವಧಿಯಲ್ಲಿ ಇದೇ ರೀತಿ ಡಬಲ್‌ ಬರ್ನರ್‌ ಸೋಲಾರ್‌ ಅಡುಗೆ ಒಲೆ ಜನಮನ್ನಣೆ (Twin solar cooktop)  ಗಳಿಸುವ ನಿರೀಕ್ಷೆ ಇದೆ.

ದರ 15,000 ರೂ. 5,000 ರೂ. ಸಬ್ಸಿಡಿ ನಿರೀಕ್ಷೆ:

ಐಒಸಿ ಇದರ ಪೇಟೆಂಟ್‌ ಅನ್ನು ಉತ್ಪಾದಕರು, ಮಾರುಕಟ್ಟೆದಾರರು, ವಿತರಕರ ಜತೆ ಹಂಚಿಕೊಳ್ಳಲಿದ್ದು, ಈ ಸೋಲಾರ್‌ ಒಲೆಯ ದರ 15,000 ರೂ.ಗೆ ನಿಗದಿಯಾಗುವ ಸಾಧ್ಯತೆ ಇದೆ. ಸರ್ಕಾರ ಸಬ್ಸಿಡಿ ಕೊಡುವ ಸಾಧ್ಯತೆ ಇದ್ದು, ಗ್ರಾಹಕರಿಗೆ 10,000 ರೂ. ಆಸುಪಾಸಿನಲ್ಲಿ ಸಿಗುವ ನಿರೀಕ್ಷೆ ಇದೆ. ಎಲ್‌ಪಿಜಿ ಸಂಪರ್ಕ ಹೊಂದಿರುವ ಎಲ್ಲರೂ ಈ ಸೋಲಾರ್‌ ಕುಕಿಂಗ್‌ ಟಾಪ್‌ ಅನ್ನು ಕೂಡ ಹೊಂದಬಹುದು. ಇದರ ಅನುಕೂಲ ಪಡೆಯಬಹುದು ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಅಡುಗೆ ಒಲೆಯಲ್ಲಿ ಸೌರ ಕ್ರಾಂತಿ:

ಡಬಲ್‌ ಬರ್ನರ್‌ ಸೌರ ಒಲೆಗಳ ವಿತರಣೆಯಿಂದ ಅಡುಗೆ ಒಲೆಗಳ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಇದು ಪರಿಸರಸ್ನೇಹಿಯಾಗಿದ್ದು, ಅಡುಗೆ ಒಲೆಗಳ ಅಗತ್ಯಗಳಿಗೆ ಕಾಯಂ ಪರಿಹಾರ ಒದಗಿಸಲಿದೆ. 2025-26ರ ವೇಳೆಗೆ 3 ಕೋಟಿ ಕುಟುಂಬಗಳಿಗೆ ಅಡುಗೆ ಇಂಧನ ನೀಡಲಿದೆ. 7 ವರ್ಷಗಳಲ್ಲಿ ಎಲ್ಪಿಜಿ ವೆಚ್ಚದಲ್ಲಿ 1 ಲಕ್ಷ ಕೋಟಿ ರೂ. ಉಳಿತಾಯವಾಗಲಿದೆ. 50,000 ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಲಿದೆ. ಸಿಒ2 ಮಾಲಿನ್ಯದಲ್ಲಿ 5 ಕೋಟಿ ಟನ್ ನಿಯಂತ್ರಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 6 ತಿಂಗಳಲ್ಲಿ ಪರೀಕ್ಷೆ:

ದೇಶ ಸೌದೆಯಿಂದ ಸೀಮೆ ಎಣ್ಣೆ ಹಾಗೂ ಎಲ್ಪಿಜಿಗೆ ಬದಲಾವಣೆಯಾಗಿದೆ. ಇನ್ನು ಮುಂದೆ ಸೋಲಾರ್‌ ಒಲೆಗೆ ಬದಲಾಗುವ ಕಾಲ ಸಮೀಪಿಸಿದೆ. ಈ ನಿಟ್ಟಿನಲ್ಲಿ ನೂತನ ಒಲೆ ಕ್ರಾಂತಿಕಾರಕವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಒಲೆಯನ್ನು 50 ಬುಡಕಟ್ಟು ಪ್ರದೇಶಗಳಲ್ಲಿ , ಕಡು ಶೀತ ಪ್ರದೇಶಗಳಲ್ಲಿ ಕಳೆದ 6 ತಿಂಗಳುಗಳಲ್ಲಿ ಪರೀಕ್ಷಿಸಲಾಗಿದೆ. ಸೇನೆ, ಬಿಆರ್‌ಒ, ಶಾಲೆಗಳಲ್ಲಿ ಬಳಸಲಾಗಿದೆ. ಲೇಹ್‌, ಲಕ್ಷದ್ವೀಪ್‌, ಗ್ವಾಲಿಯರ್‌, ಉದಯ್‌ಪುರ, ದಿಲ್ಲಿ, ಎನ್‌ಸಿಆರ್‌ ಮೊದಲಾದ ಕಡೆಗಳಲ್ಲಿ ಭಿನ್ನ ಹವಾಮಾನಗಳ ಪ್ರದೇಶಗಳಲ್ಲಿ ಪರೀಕ್ಷಿಸಲಾಗಿದೆ.

ಸೋಲಾರ್‌ ಒಲೆಯನ್ನು ಐಒಸಿಯ ವೆಬ್‌ಸೈಟ್‌ನಲ್ಲಿ ಬುಕಿಂಗ್‌ ಮಾಡಬಹುದು .https://iocl.com/IndoorSolarCookingSystem

ಸೋಲಾರ್‌ ಒಲೆಯನ್ನು ಬಿಸಿಲಲ್ಲಿ ಇಡಬೇಕಿಲ್ಲ, ರಾತ್ರಿಯ ಅಡುಗೆಗೂ ಬಳಸಬಹುದು:

ಅಡುಗೆ ಮನೆಯಲ್ಲಿ ಮುಖ್ಯ ಘಟಕವಾದ ಸೋಲಾರ್‌ ಒಲೆ ಇರುತ್ತದೆ. ಸೌರ ಫಲಕ (PV Panel) ಮನೆಯಿಂದ ಹೊರಗೆ ಇರುತ್ತದೆ. ಅಲ್ಲಿಂದ ಕೇಬಲ್‌ ಮೂಲಕ ಒಲೆಗೆ ಸೌರಶಕ್ತಿ ವರ್ಗಾವಣೆಯಾಗುತ್ತದೆ. ಈಗಿನ ಕೆಲ ಸೌರ ಒಲೆಗಳಂತೆ ಬಿಸಿಲಿನಲ್ಲಿ ಇಡಬೇಕಾಗಿಲ್ಲ. ಈ ಒಲೆಯು ಸೌರಶಕ್ತಿ ಮತ್ತು ಸಾಂಪ್ರದಾಯಿಕ ಗ್ರಿಡ್ ಆಧಾರಿತ ವಿದ್ಯುತ್‌ನಿಂದಲೂ ಚಾಲನೆಯಾಗುತ್ತದೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ ಸಂಶೋಧನಾ ವಿಭಾಗ ಇದನ್ನು ಅಭಿವೃದ್ಧಿಪಡಿಸಿದೆ. ಈ ಸೌರ ಒಲೆಯು ಸೂರ್ಯನಿಂದ ಎನರ್ಜಿಯನ್ನು ಸಂಗ್ರಹಿಸಿ ಥರ್ಮಲ್‌ ಬ್ಯಾಟರಿಯಲ್ಲಿ ಸಂಗ್ರಹಿಸುತ್ತದೆ. ಹಾಗೂ ಅಡುಗೆ ಒಲೆಯ ಬಳಕೆಗೆ ಪರಿವರ್ತಿಸುತ್ತದೆ. ಹೀಗೆ ಸಂಗ್ರಹವಾಗುವ ಎನರ್ಜಿಯಿಂದ ಕೇವಲ ಹಗಲಿನಲ್ಲಿ ಮಾತ್ರವಲ್ಲದೆ, ರಾತ್ರಿಯ ಭೋಜನದ ಅಡುಗೆಗೂ ಬಳಸಬಹುದು. ಈ ಅಡುಗೆ ಸ್ಟೌವ್‌ನ ಬಾಳಿಕೆ ಅವಧಿ 10 ವರ್ಷ. ಯಾವುದೇ ನಿರ್ವಹಣಾ ವೆಚ್ಚ ಇಲ್ಲ. ಸೋಲಾರ್‌ ಪ್ಯಾನೆಲ್‌ ಆಯುಷ್ಯ 25 ವರ್ಷ. ಅಡುಗೆಯಲ್ಲಿ ಆಹಾರವನ್ನು ಕುದಿಸಲು, ಬಿಸಿ ಮಾಡಲು, ಬೇಯಿಸಲು ಸೇರಿದಂತೆ ಎಲ್ಲ ಉದ್ದೇಶಗಳಿಗೆ ಈ ಒಲೆಯನ್ನು ಬಳಸಬಹುದು.

Exit mobile version