ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ ಅಥವಾ ಪಿಎಂ ಸ್ವನಿಧಿ (PM SVANidhi ) ಯೋಜನೆಯ ಬಗ್ಗೆ ನೀವು ಕೇಳಿರಬಹುದು. ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ 50,000 ರೂ. ತನಕ ಸಾಲವನ್ನು ವಿತರಿಸಲು ಬಿಡುಗಡೆಗೊಳಿಸಿರುವ ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆ ಇದಾಗಿದೆ. ಈ ಯೋಜನೆಯ ಅಡಿಯಲ್ಲಿ ಫಸ್ಟ್ ಟರ್ಮ್ ಲೋನ್ ವಿಭಾಗದಲ್ಲಿ ಇದುವರೆಗೆ 76,78,830 ಅರ್ಹ ಅರ್ಜಿಗಳನ್ನು ಸ್ವೀಕರಿಸಲಾಗಿದೆ. 60,03,816 ಪ್ರಕರಣಗಳಲ್ಲಿ ಸಾಲ ವಿತರಿಸಲಾಗಿದೆ.
ಏನಿದು ಪಿಎಂ ಸ್ವನಿಧಿ ಯೋಜನೆ: ಬೀದಿ ಬದಿ ವ್ಯಾಪಾರಿಗಳಿಗೆ ಬಂಡವಾಳ ನೆರವು ನೀಡುವ ಸಲುವಾಗಿ ಇರುವ ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆ. ಲಾಕ್ ಡೌನ್ ಸಂದರ್ಭ ಸಂಕಷ್ಟಕ್ಕೀಡಾಗಿದ್ದ ರಸ್ತೆ ಬದಿ ವ್ಯಾಪಾರಿಗಳ ನೆರವಿಗೆ ಇದನ್ನು ಆರಂಭಿಸಲಾಗಿದ್ದು, ಮುಂದುವರಿದಿದೆ. ಆರಂಭಿಕ ಹಂತದಲ್ಲಿ 10,000 ರೂ. ಸಾಲ ನೀಡಲಾಗುವುದು. ಬಳಿಕ 50,000 ರೂ. ತನಕ ವಿಸ್ತರಿಸಲು ಅವಕಾಶ ಇದೆ. ಸ್ವನಿಧಿ ಸಾಲಕ್ಕೆ ಬಡ್ಡಿ ದರ 7% ಆಗಿರುತ್ತದೆ. ಸಕಾಲಕ್ಕೆ ಸಾಲ ಮರು ಪಾವತಿಸುವವರಿಗೆ ಹೆಚ್ಚಿನ ಸಾಲಕ್ಕೆ ಅರ್ಹತೆಯಾಗುತ್ತದೆ.
ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಪಡೆಯಲು ಬೀದಿ ವ್ಯಾಪಾರಿಗಳು ಯಾವುದೇ ಅಡಮಾನ ಇಡಬೇಕಾಗಿರುವುದಿಲ್ಲ. ಮೊದಲ 10,000 ರೂ. ಸಾಲದ ಮರು ಪಾವತಿಗೆ ಒಂದು ವರ್ಷ ಅವಧಿ ಇರುತ್ತದೆ. ನಿರ್ದಿಷ್ಟ ಸಂಖ್ಯೆಯಲ್ಲಿ ಡಿಜಿಟಲ್ ಟ್ರಾನ್ಸಕ್ಷನ್ ಮಾಡುವವರಿಗೆ 100 ರೂ. ತನಕ ಕ್ಯಾಶ್ ಬ್ಯಾಕ್ ಇರುತ್ತದೆ. ಮೊದಲ ಸಾಲವನ್ನು ಸಕಾಲಕ್ಕೆ ಮರು ಪಾವತಿಸುವವರು 20,000 ರೂ. ಹಾಗೂ ಬಳಿಕ 50,000 ರೂ. ಸಾಲ ಪಡೆಯುವ ಅರ್ಹತೆಯನ್ನು ಗಳಿಸುತ್ತಾರೆ.
ಬೀದಿ ಬದಿಯ ವ್ಯಾಪಾರಿಗಳು ಸ್ಥಳೀಯ ಆಡಳಿತ ಸಂಸ್ಥೆಗಳು ನೀಡಿರುವ ಐಡೆಂಟಿಟಿ ಕಾರ್ಡ್ ಅನ್ನು ಹೊಂದಿರಬೇಕು. ಸ್ಥಳೀಯಾಡಳಿತದ ಸರ್ವೇನಲ್ಲಿ ಗುರುತಿಸಿಕೊಂಡಿರಬೇಕು.
ರಸ್ತೆ ಬದಿಯಲ್ಲಿ ತರಕಾರಿ, ಹಣ್ಣು ಹಂಪಲು, ದಿನೋಪಯೋಗಿ ವಸ್ತುಗಳು, ಆಟಿಕೆಗಳು, ರೆಡಿಮೇಡ್ ವಸ್ತುಗಳು, ಬಟ್ಟೆ ಬರೆಗಳು, ಬ್ರೆಡ್, ಮೊಟ್ಟೆ, ಪುಸ್ತಕ, ಪೆನ್ನು ಇತ್ಯಾದಿಗಳನ್ನು ಮಾರಾಟ ಮಾಡುವವರು, ತಳ್ಳುವ ಗಾಡಿಯನ್ನು ಇಟ್ಟು ರಸ್ತೆ ಪಕ್ಕ ಮಾರಾಟ ಮಾಡುವವರು, ಪಾನ್ ಶಾಪ್‌ನವರು, ರಸ್ತೆ ಬದಿಯ ಸಲೂನ್‌ಗಳನ್ನು ನಡೆಸುವವರು, ರಸ್ತೆ ಬದಿ ಅಂಗಡಿಯಲ್ಲಿ ಇಸ್ತ್ರಿ ಹಾಕುವರು ಈ ಸಾಲ ಪಡೆಯಬಹುದು.
ಇದನ್ನೂ ಓದಿ: Money plus : ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ನಲ್ಲಿ ಯಾಕೆ ಹೂಡಬೇಕು?
ಸಾರ್ವಜನಿಕ-ಖಾಸಗಿ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಕಿರು ಹಣಕಾಸು ಬ್ಯಾಂಕ್‌ಗಳು, ಕೋಪರೇಟಿವ್ ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು, ಎಸ್‌ಎಚ್‌ಜಿ ಬ್ಯಾಂಕ್‌ಗಳು ಸಾಲ ವಿತರಿಸಬಹುದು. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ತರಬೇತಿ, ನರೇಗಾ ಕಾರ್ಡ್, ಪ್ಯಾನ್ ಕಾರ್ಡ್ ಇವುಗಳಲ್ಲಿ ಕೆಲ ದಾಖಲೆಗಳು ಇದ್ದರೆ ಸಾಕು. ಆಧಾರ್ ಮತ್ತು ವೋಟರ್ ಐಡಿ ಕಡ್ಡಾಯವಾಗಿ ಬೇಕು.